ಬೆಂಗಳೂರು: ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರು ಮತ್ತೊಂದು ಜನಪರ ಮತ್ತು ಶ್ಲಾಘನೀಯ ನಿರ್ಧಾರ ತೆಗೆದುಕೊಂಡಿದ್ದು, ನಗರದ ಕಲಾಸಿಪಾಳ್ಯ ಬಸ್ ನಿಲ್ದಾಣಕ್ಕೆ ಪರೋಪಕಾರಿ ಶ್ರೀ ದೊಡ್ಡಣ್ಣಶೆಟ್ಟರ ಕಲಾಸಿಪಾಳ್ಯ ಬಸ್ ನಿಲ್ದಾಣವೆಂದು ಮರು ನಾಮಕರಣ ಮಾಡಲು ತೀರ್ಮಾನಿಸಿದ್ದಾರೆ.
ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಧರ್ಮಸಂಸ್ಥೆ ( SLN ಚಾರಿಟಿ) ಯನ್ನು ಶ್ರೀ ದೊಡ್ಡಣ್ಣಶೆಟ್ಟರು 1906 ರಲ್ಲಿಯೇ ಸ್ಥಾಪಿಸಿ, ಸಮಾಜದಲ್ಲಿನ ಬಡವರು, ಹಿಂದುಳಿದವರು ಎಂಬ ಭೇದಭಾವವಿಲ್ಲದೇ ಸರ್ವ ಜನಾಂಗಕ್ಕೂ ಸಮಾನ ಶಿಕ್ಷಣವನ್ನು ನೀಡಬೇಕೆಂಬ ದೂರದೃಷ್ಟಿ ಇಟ್ಟುಕೊಂಡು, ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ಸಮಾಜ ಸೇವೆಯಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದರು. ದೊಡ್ಡಣ್ಣ ಶೆಟ್ಟರ ಸೇವೆ ಗುರುತಿಸಿ, ಅಂದಿನ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ರಾಜರ ದರ್ಭಾರಿಗೆ ಆಹ್ವಾನಿಸಿ “ಜನೋಪಕಾರಿ” ಎಂಬ ಬಿರುದನ್ನು ಹಾಗೂ ಪದಕವನ್ನು ನೀಡಿ ಸನ್ಮಾನಿಸಿದ್ದರು.
ದೊಡ್ಡಣ್ಣ ಶೆಟ್ಟರು ತಮ್ಮ 5 ಎಕರೆ ಭೂಮಿಯನ್ನು ಉಚಿತವಾಗಿ ಕಲಾಸಿಪಾಳ್ಯದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ನೀಡಿದ ಮಹಾದಾನಿಯಾಗಿದ್ದು, ದೊಡ್ಡಣ್ಣ ಶೆಟ್ಟರು ಸ್ಥಾಪಿಸಿರುವ ಈ ಸಂಸ್ಥೆಯ ಕಾರ್ಯಕ್ರಮಗಳಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ರಾಷ್ಟ್ರಕವಿ ರವೀಂದ್ರನಾಥ ಠಾಗೋರ್ ಮತ್ತು ಡಾ.ಅನಿಬೆಸೆಂಟ್ ಭೇಟಿ ಭಾಗವಹಿಸಿರುವುದು ಹೆಮ್ಮೆಯ ವಿಷಯ.
ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರು ನಗರದ ಕಲಾಸಿಪಾಳ್ಯ ಬಸ್ ನಿಲ್ದಾಣಕ್ಕೆ “ಜನೋಪಕಾರಿ ಶ್ರೀ ದೊಡ್ಡಣ್ಣಶೆಟ್ಟರ ಕಲಾಸಿಪಾಳ್ಯ ಬಸ್ ನಿಲ್ದಾಣ” ವೆಂದು ಮರು ನಾಮಕರಣ ಮಾಡಿರುವುದಕ್ಕೆ ಸುಮಾರು 7 ಲಕ್ಷ ಜನಸಂಖ್ಯೆ ಹೊಂದಿರುವ ಸಮಸ್ತ ಗಾಣಿಗ ಸಮುದಾಯ ಚಿರರುಣಿಯಾಗಿದ್ದು, ಇದೊಂದು ಐತಿಹಾಸಿಕ ತೀರ್ಮಾನವೆಂದೇ ಪರಿಗಣಿಸಲಾಗಿದೆ ಎಂದು ತಿಳಿಸಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ್ದಾರೆ.
ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಧರ್ಮಸಂಸ್ಥೆ (SLN ಚಾರಿಟಿ) ಕೋಟೆ ರವರ ವತಿಯಿಂದ ವಿ.ಆರ್. ಸುದರ್ಶನ್, ಮಾಜಿ ಸಚೇತಕರು ಹಾಗೂ ಅಧ್ಯಕ್ಷರು ಚಿತ್ರಕಲಾ ಪರಿಷತ್, ಸುರೇಶ್ ಅಧ್ಯಕ್ಷರು, ಲಕ್ಷ್ಮಿ ಸುರೇಶ್ ಕಾರ್ಯದರ್ಶಿ, ನಾಗರಾಜ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

