ಹಾವೇರಿ( ಶಿಗ್ಗಾವಿ): ಈ ಚುನಾವಣೆಯಲ್ಲಿ ನಾನೇ ಸ್ಪರ್ಧಿಸಿದ್ದೇನೆ ಎಂದು ತಿಳಿದು ಭರತ ಬೊಮ್ಮಾಯಿಯನ್ನು ಬೆಂಬಲಿಸಿ ಗೆಲ್ಲಿಸಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಮನವಿ ಮಾಡಿದರು.
ಅವರು ಭಾನುವಾರ ತಾಲೂಕಿನ ಹೊಸೂರು, ದುಂಡಸಿ, ಜಕನಕಟ್ಟಿ, ಸೇರಿದಂತೆ ಅನೇಕ ಗ್ರಾಮಗಳಲ್ಲಿ ಭರತ್ ಬೊಮ್ಮಾಯಿ ಪರ ಮತ ಯಾಚನೆ ಮಾಡಿದರು. ಕಳೆದ ಹದಿನೈದು ವರ್ಷದಲ್ಲಿ ಈ ತಾಲೂಕಿನ ಅಭಿವೃದ್ಧಿಯ ಚಿತ್ರಣ ಹೇಗೆ ಬದಲಾಗಿದೆ ಎನ್ನುವುದನ್ನು ತಾವೆಲ್ಲ ನೊಡಿದ್ದೀರಿ. ಅಭಿವೃದ್ಧಿ ನಿಂತ ನೀರಲ್ಲ ಅದು ನಿರಂತರ ಮುಂದುವರೆಯಬೇಕು ಹೀಗಾಗಿ ಚುನಾವಣೆ ಎದುರಿಸುತ್ತಿದ್ದೇವೆ ಎಂದರು.
ನಾನು ಈ ಬಾರಿ ಚುನಾವಣೆಯಲ್ಲಿ ನನ್ನ ಮಗನನ್ನು ನಿಲ್ಲಿಸಬಾರದು ಎಂದು ತೀರ್ಮಾನಿಸಿದ್ದೆ. ಹೈಕಮಾಂಡ್ ನೀವು ಇರಲೇಬೇಕು. ನಿಮ್ಮ ಮಗನಿಗೆ ಟಿಕೆಟ್ ಕೊಡುತ್ತೇವೆ. ನೀವು ಅಲ್ಲಿ ಕೆಲಸ ಮಾಡಿ ಎಂದು ಹೇಳಿದ್ದಾರೆ. ನಾನು ಈ ತಾಲೂಕನ್ನು ಎಂದು ಬಿಟ್ಟು ಹೋಗುವುದಿಲ್ಲ. ನಿಮ್ಮ ಪ್ರೀತಿಗೆ ಎಂದೂ ಬೆಲೆ ಕಟ್ಟಲಾಗುವುದಿಲ್ಲ. ಈ ಕ್ಷೇತ್ರದ ಅಭಿವೃದ್ಧಿ ಇನ್ನೂ ಆಗಬೇಕಿದೆ. ಭರತ್ ಬೊಮ್ಮಾಯಿ ಅಭಿವೃದ್ದಿ ಕಾರ್ಯ ಮುಂದುವರೆಸುತ್ತಾನೆ. ಭರತ್ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.
ರಾಜ್ಯದಲ್ಲಿ ಪ್ರವಾಹ ಬಂದಾಗ ಕೇಂದ್ರ ಸರ್ಕಾರ ನೀಡಿದ್ದಕ್ಕಿಂತ ಎರಡು ಪಟ್ಟು ಬೆಳೆ ಪರಿಹಾರ ನೀಡಿದ್ದೇವೆ. ರಾಜ್ಯದಲ್ಲಿ ಸುಮಾರು ಏಳು ಸಾವಿರ ಕೋಟಿ ರೂ. ಪರಿಹಾರ ನೀಡಿದ್ದೇವೆ. ಶಿಗ್ಗಾವಿ ಕ್ಷೇತ್ರದ ರೈತರಿಗೂ ಬಂದಿದೆ. ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ನಮ್ಮ ನಾಯಕ ಯಡಿಯೂರಪ್ಪ ನಿರ್ಧಾರದಂತೆ ಪ್ರತಿ ಮನೆಗೆ ಐದು ಲಕ್ಷ ರೂಪಾಯಿ ಪರಿಹಾರ ನೀಡಿದ್ದೇವೆ. ಶಿಗ್ಗಾವಿ ಕ್ಷೇತ್ರದಲ್ಲಿ ಸುಮಾರು 18 ಸಾವಿರ ಮನೆಗಳ ನಿರ್ಮಾಣ ಮಾಡಿದ್ದೇವೆ ಎಂದು ಹೇಳಿದರು.