ಹುಬ್ಬಳ್ಳಿ: ರಾಜ್ಯ ಸರ್ಕಾರದ ಸೂಚನೆಯ ಮೇರೆಗೇ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ ಎಂಬುದಾಗಿ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಆರೋಪಿಸಿದರು.
ವಕ್ಫ್ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷರಾಗಿರುವ ಅವರು ಹುಬ್ಬಳ್ಳಿಗೆ ಭೇಟಿ ನೀಡಿ ರೈತರ ಅಹವಾಲು ಆಲಿಸಿದ ಬಳಿಕ ಮಾತನಾಡಿದರು.
ಆಡಳಿತ ವ್ಯವಸ್ಥೆಯ ಕೈವಾಡ ಇಲ್ಲದೆ ಈ ರೀತಿ ಎಲ್ಲ ಆಗಲು ಸಾಧ್ಯವಿಲ್ಲ. ರೈತರ ಜಮೀನು, ದೇಗುಲ, ಪಾರಂಪರಿಕ ತಾಣಗಳ ದಾಖಲೆಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ. 10-15 ರೈತರ ನಿಯೋಗ ಮನವಿ ಸಲ್ಲಿಸುವ ನಿರೀಕ್ಷೆ ಇತ್ತು. ಆದರೆ, 70ಕ್ಕೂ ಹೆಚ್ಚು ಅಹವಾಲು ಬಂದಿದೆ ಎಂದರು.
ರಾಜ್ಯ ಸರ್ಕಾರ ಸೂಚನೆಯಂತೆ ವಕ್ಫ್ ಆಸ್ತಿ ಎಂದು ಘೋಷಿಸಲಾಗಿದೆ. ಈಗ ರೈತರಿಗೆ ಕೊಟ್ಟ ನೋಟಿಸ್ ಹಿಂಪಡೆಯುವುದಾಗಿ ಹೇಳಿದ್ದಾರೆ. ರಾಜ್ಯ ಸರ್ಕಾರದ ಕೈವಾಡ ಇಲ್ಲದೆ ಆಸ್ತಿ ಕಬಳಿಸಲು ಸಾಧ್ಯವಿಲ್ಲ.
ಸರ್ಕಾರದ ಸೂಚನೆ ಇಲ್ಲದೆ ಅಧಿಕಾರಿಗಳು ಹೇಗೆ ಕೆಲಸ ಮಾಡ್ತಾರೆ? ಇದು ಅತ್ಯಂತ ಗಂಭೀರವಾದ ವಿಚಾರ. ಎಲ್ಲ ಅಹವಾಲುಗಳನ್ನು ಗಂಭೀರವಾಗಿ ಪರಿಗಣಿಸಿ ವರದಿ ತಯಾರಿಸುತ್ತೇವೆ ಎಂದರು.