ಕೊಲ್ಕತ್ತಾ: ಟೀಮ್ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಮತ್ತು ಅವರ ಪರಿತ್ಯಕ್ತ ಪತ್ನಿ ಹಸಿನ್ ಜಹಾನ್ ನಡುವಣ ಪ್ರಕರಣ ಚರ್ಚೆಗೀಡಾಗಿದೆ.
ಕಳೆದ ಹಲವಾರು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ಈ ದಂಪತಿಗಳ ವಿಚ್ಛೇದನದ ಔಪಚಾರಿಕತೆಗಳು ಪೂರ್ಣಗೊಳ್ಳುವ ಮೊದಲೇ, ಹೈಕೋರ್ಟ್ ಭಾರತೀಯ ವೇಗಿಗೆ ಜೀವನಾಂಶವನ್ನು ಪಾವತಿಸಲು ಆದೇಶಿಸಿದೆ.
ಇಬ್ಬರ ನಡುವಿನ ಪ್ರಕರಣವನ್ನು ಆಲಿಸಿದ ನಂತರ ಕೊಲ್ಕತ್ತಾ ಹೈಕೋರ್ಟ್, ಮೊಹಮ್ಮದ್ ಶಮಿಗೆ ಪ್ರತಿ ತಿಂಗಳು ಪತ್ನಿ ಮತ್ತು ಮಗಳಿಗೆ 4 ಲಕ್ಷ ರೂ.ಗಳನ್ನು ಜೀವನಾಂಶವಾಗಿ (ನಿರ್ವಹಣೆ) ಪಾವತಿಸಬೇಕೆಂದು ಎಂದು ಆದೇಶಿಸಿದೆ.
ಹೈಕೋರ್ಟ್ ತೀರ್ಪಿನ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಹಸಿನ್ ಜಹಾನ್, ಇದು ತನ್ನ ಗೆಲುವು ಸಂತಸ ವ್ಯಕ್ತಪಡಿಸಿದ್ದಾರೆ. ಇದಾಗ್ಯೂ ಜೀವನಾಂಶ ಮೊತ್ತ ತುಂಬಾ ಕಡಿಮೆಯಾಗಿದೆ ಎಂದು ಅಸಮಾಧಾನವನ್ನು ಸಹ ಹೊರಹಾಕಿದ್ದಾರೆ.
ಮೊಹಮ್ಮದ್ ಶಮಿ ಹಾಗೂ ಹಸಿನ್ ಜಹಾನ್ 2014 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ 2018 ರಲ್ಲಿ ಇಬ್ಬರ ನಡುವೆ ವೈಮನಸ್ಸು ಉಂಟಾಗಿ ದೂರವಾಗಿದ್ದರು. ಅದೇ ವರ್ಷ ಹಸಿನ್ ಜಹಾನ್, ಶಮಿ ವಿರುದ್ಧ ಪೊಲೀಸ್ ದೂರು ದಾಖಲಿಸಿ, ಅವರ ಕುಟುಂಬದ ವಿರುದ್ಧ ವಂಚನೆ ಮತ್ತು ಕಿರುಕುಳದ ಆರೋಪ ಮಾಡಿದ್ದರು.
ಟೀಮ್ ಇಂಡಿಯಾ ಕ್ರಿಕೆಟಿಗನ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಹೊರಿಸಿದ್ದ ಹಸಿನ್ ಜಹಾನ್, ಶಮಿಗೆ ಇತರೆ ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಇದೆ ಬಹಿರಂಗ ಹೇಳಿಕೆ ನೀಡಿದ್ದರು. ಇದಾದ ಬಳಿಕ ನ್ಯಾಯಾಲಯದ ಮೆಟ್ಟಿಲೇರಿದ್ದ ಹಸಿನ್ ಜಹಾನ್, ಮೊಹಮ್ಮದ್ ಶಮಿಯಿಂದ ತಿಂಗಳಿಗೆ 10 ಲಕ್ಷ ರೂ. ಜೀವನಾಂಶದ ಬೇಡಿಕೆಯಿಟ್ಟಿದ್ದರು.
ಇದೀಗ ಈ ಪ್ರಕರಣದ ತೀರ್ಪು ಬಂದಿದ್ದು, ಪತ್ನಿ ಮತ್ತು ಮಗಳಿಗೆ ತಿಂಗಳಿಗೆ 4 ಲಕ್ಷ ರೂ. ಜೀವನಾಂಶ ನೀಡಬೇಕೆಂದು ಮೊಹಮ್ಮದ್ ಶಮಿಗೆ ಕೊಲ್ಕತ್ತಾ ಹೈಕೋರ್ಟ್ ಸೂಚಿಸಿದೆ.
ಹಸಿನ್ ಜಹಾನ್ ತಕರಾರು:
ಈ ಪ್ರಕರಣದಲ್ಲಿ, ಕೊಲ್ಕತ್ತಾ ಹೈಕೋರ್ಟ್ ತಿಂಗಳಿಗೆ 4 ಲಕ್ಷ ರೂ. ಭತ್ಯೆ ನೀಡುವಂತೆ ಮೊಹಮ್ಮದ್ ಶಮಿಗೆ ಆದೇಶಿಸಿದೆ. ಈ ಭತ್ಯೆಯಲ್ಲಿ ಮಗಳಿಗೆ 2.5 ಲಕ್ಷ ರೂ. ಮತ್ತು ಹಸೀನ್ ಜಹಾನ್‌ಗೆ 1.5 ಲಕ್ಷ ರೂ. ನಿಗದಿಪಡಿಸಲಾಗಿದೆ. ಆದರೆ ಹಸೀನ್ ಜಹಾನ್ ಈ ಮೊತ್ತವನ್ನು ತುಂಬಾ ಕಡಿಮೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಕೋರ್ಟ್ 4 ಲಕ್ಷ ರೂ. ನಿಗದಿಪಡಿಸಿರುವುದು ಕಡಿಮೆ. ಏಕೆಂದರೆ ಎಲ್ಲೆಡೆ ಹಣದುಬ್ಬರವಿದೆ. ಜೀವನಾಂಶದ ಮೊತ್ತವನ್ನು ಗಂಡನ ಆದಾಯ ಮತ್ತು ಸಾಮಾಜಿಕ ಸ್ಥಾನಮಾನದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಶಮಿ ಅವರ ಐಷಾರಾಮಿ ಜೀವನಶೈಲಿ ಪರಿಗಣಿಸಿದರೆ, ತಿಂಗಳಿಗೆ 4 ಲಕ್ಷ ರೂ. ಎಂಬುದು ತುಂಬಾ ಕಡಿಮೆ.
ನಾವು 10 ಲಕ್ಷ ರೂ.ಗಳನ್ನು ಕೇಳಿದ್ದೆವು. ಅದು ಕೂಡ 7 ವರ್ಷ 4 ತಿಂಗಳ ಹಿಂದೆ. ಈಗ ಹಣದುಬ್ಬರವೂ ಹೆಚ್ಚಾಗಿದೆ. ಹೀಗಾಗಿ ನಮಗೆ ಸಿಕ್ಕಿರುವ ಜೀವನಾಂಶವು ತುಂಬಾ ಕಡಿಮೆಯಾಗಿದೆ ಎಂದು ಹಸಿನ್ ಜಹಾನ್ ಹೇಳಿದ್ದಾರೆ.
ಒಟ್ಟಿನಲ್ಲಿ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಮೊಹಮ್ಮದ್ ಶಮಿ ತನ್ನ ವೈಯುಕ್ತಿಕ ವಿಚಾರಗಳಿಂದ ಸುದ್ದಿಯಲ್ಲಿದ್ದಾರೆ. ಅದರಲ್ಲೂ ಪತ್ನಿ ಹಸಿನ್ ಜಹಾನ್ ವಿಷಯದಿಂದಾಗಿ ಹಲವು ಬಾರಿ ಸುದ್ದಿಯ ಕೇಂದ್ರ ಬಿಂದುವಾಗಿದ್ದು ಮಾತ್ರ ವಿಪರ್ಯಾಸ ಎನ್ನಬಹುದು.