ಹೊಸೂರು ಏರ್‌ಪೋರ್ಟ್ ಗೆ ಎರಡು ಜಾಗ ಶಾರ್ಟ್ ಲಿಸ್ಟ್ ಮಾಡಿದ ತಮಿಳುನಾಡು ಸರಕಾರ
ಬೆಂಗಳೂರು: ಕರ್ನಾಟಕ ಸರಕಾರ ಎರಡನೇ ಏರ್ ಪೋರ್ಟ್ ಗೆ ಮೀನಾಮೇಷ ಎಣಿಸುತ್ತಿರುವ ಹೊತ್ತಿನಲ್ಲೇ ತಮಿಳುನಾಡು ಸರಕಾರ ಹೊಸೂರು ವಿಮಾನ ನಿಲ್ದಾಣಕ್ಕೆ ಜಾಗ ಅಂತಿಮಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೆಡ್ಡು ಹೊಡೆಯುವಂತೆ ಹೊಸೂರಿನಲ್ಲಿ ವಿಮಾನ ನಿಲ್ದಾಣ ಆರಂಭಿಸುವ ಪ್ರಯತ್ನಕ್ಕೆ ತಮಿಳುನಾಡು ಸರಕಾರ ತೀರ್ಮಾನಿಸಿದೆ. ಅದಕ್ಕಾಗಿ ಹೊಸೂರು ಬಳಿ ಎರಡು ಜಾಗಗಳನ್ನು ಶಾರ್ಟ್ ಲಿಸ್ಟ್ ಮಾಡಿದೆ.
ಉತ್ಪಾದನಾ ಕೇಂದ್ರದ ಅಗತ್ಯತೆಗಳನ್ನು ಪೂರೈಸಲು ಹೊಸ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ನಿರ್ಮಿಸಲು ತಮಿಳುನಾಡು ಸರ್ಕಾರ ಕೃಷ್ಣಗಿರಿ ಜಿಲ್ಲೆ ಹೊಸೂರಿನಲ್ಲಿ ಎರಡು ಸಂಭಾವ್ಯ ಜಾಗಗಳನ್ನು ಗುರುತಿಸಿದೆ. 20 ಕಿಮೀ ವ್ಯಾಪ್ತಿಯಲ್ಲಿರುವ ಸ್ಥಳಗಳ ವಿವರ ಅಧ್ಯಯನ ನಡೆಸಲು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಸರಕಾರ ಮನವಿ ಮಾಡಿದೆ.
ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಉನ್ನತ ಮಟ್ಟದ ಸಭೆ ನಡೆಸಿ, ಎರಡು ಜಾಗಗಳನ್ನು ಅಂತಿಮಗೊಳಿಸಿದ್ದಾರೆ. ರಾಜ್ಯ ಸರ್ಕಾರದ ಕೋರಿಕೆ ಮೇರೆಗೆ, AAI ಮತ್ತು TIDCO ತಂಡ ಸೆಪ್ಟೆಂಬರ್‌ನಲ್ಲಿ ಹೊಸೂರು ಬಳಿ ನಾಲ್ಕು ಉದ್ದೇಶಿತ ಜಾಗಗಳ ಕಾರ್ಯಸಾಧ್ಯತೆ ಬಗ್ಗೆ ಮೌಲ್ಯಮಾಪನ ನಡೆಸಿ, ಅಧ್ಯಯನ ವರದಿ ನೀಡಿತ್ತು.
ಹೊಸೂರು ಬಳಿಯ ತೊಗರೈ ಅಗ್ರಹಾರಂ, ಶೂಲಗಿರಿ, ದಾಸಪಲ್ಲಿ ಮತ್ತು ಖಾಸಗಿ ಏರ್‌ಸ್ಟ್ರಿಪ್ ಬಳಿಯ ಪ್ರದೇಶವನ್ನು ಅಂತಿಮಗೊಳಿಸಲಾಗಿದೆ. ಎಎಐನ ಮಧ್ಯಂತರ ವರದಿ ಆಧಾರದ ಮೇಲೆ ಈಗ ಈ ಎರಡು ಸ್ಥಳಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಮುಂದಿನ ವಾರ ಎಎಐನಿಂದ ವಿವರವಾದ ಅಧ್ಯಯನ ನಡೆಸುವಂತೆ ವಿನಂತಿಸಲು ರಾಜ್ಯ ಸರ್ಕಾರ ಯೋಜಿಸಿದೆ” ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ ರಾಜಧಾನಿ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡಲು ಈಗಾಗಲೇ ಹೊಸೂರಿನಲ್ಲಿ ಅನೇಕ ಕೈಗಾರಿಕಾ ಕೇಂದ್ರಗಳು ಸ್ಥಾಪನೆಗೊಂಡಿವೆ. ಅದೇ ರೀತಿ ಬೆಂಗಳೂರಿನ ಸಂಚಾರ ವ್ಯವಸ್ಥೆಯನ್ನು ಗಡಿನಾಡು ಹೊಸೂರಿನಲ್ಲಿ ನಿಯಂತ್ರಿಸುವ ಸಲುವಾಗಿ ತಮಿಳುನಾಡು ಸರಕಾರ ಏರ್‌ಪೋರ್ಟ್ ಆರಂಭಿಸಲು ತೀರ್ಮಾನಿಸಿದೆ.
ಇದೇ ವೇಳೆ ಕರ್ನಾಟಕ ಸರಕಾರ ಕೂಡ ಎರಡನೇ ಏರ್‌ಪೋರ್ಟ್ ನಿರ್ಮಾಣಕ್ಕೆ ತಯಾರಿ ನಡೆಸುತ್ತಿದೆ. ಒದರ ಭಾಗವಾಗಿ ಕುಣಿಗಲ್, ನೆಲಮಂಗಲ ಪ್ರದೇಶದಲ್ಲಿ ಜಾಗ ಗುರುತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಆದರೆ, ಕರ್ನಾಟಕಕ್ಕೆ ಮೊದಲೇ ಏರ್‌ಪೋರ್ಟ್ ನಿರ್ಮಿಸುವ ಗುರಿಯೊಂದಿಗೆ ತಮಿಳುನಾಡು ಸರಕಾರ ಕಾರ್ಯನಿರ್ವಹಿಸುತ್ತಿದೆ.