ವೈದ್ಯರ ಮೇಲೆ ಹಲ್ಲೆ ಹಾಗೂ ನಿಂದಿನೆಗೆ 7 ವರ್ಷ ಕಠಿಣ ಶಿಕ್ಷೆ, 2. ಲಕ್ಷ ರೂ ದಂಡ: ದಿನೇಶ್ ಗುಂಡೂರಾವ್
ಬೆಂಗಳೂರು: ಆಸ್ಪತ್ರೆಗೆ ಹಾನಿ ಹಾಗೂ ವೈದ್ಯರ ಮೇಲೆ ಹಲ್ಲೆ ಹಾಗೂ ನಿಂದಿಸಿದರೆ 7 ವರ್ಷ ಕಠಿಣ ಶಿಕ್ಷೆ ಹಾಗೂ ದಂಡ ಹಾಕುವ ಕಾನೂನು ಜಾರಿಗೆ ತಂದಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮಹಾಲಕ್ಷ್ಮಿ ಲೇಔಟ್ ನ ಪ್ರಿಸ್ಪಿನ್ ಆಸ್ಪತ್ರೆಯ 20 ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ಸರಕಾರ ವೈದ್ಯರ ರಕ್ಷಣೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ವೈದ್ಯರ ಮೇಲೆ ನಡೆಯುವ ಹಲ್ಲೆಗಳಿಗೆ ಕಠಿಣ ಶಿಕ್ಷೆ ವಿಧಿಸುವ ಜಾಯಿದೆ ರೂಪಿಸಿದ್ದು, ರಾಜ್ಯಪಾಲರು ಅಂಕಿತ ಹಾಕಿದ್ದಾರೆ ಎಂದರು.
ಪ್ರಿಸ್ಟಿನ್ ಆಸ್ಪತ್ರೆ ಸೇವಾ ಮನೋಭಾವನೆ ಇಟ್ಟುಕೊಂಡು ಕಡಿಮೆ ವೆಚ್ಚದಲ್ಲಿ ಸೇವೆ ಒದಗಿಸುವ ಮೂಲಕ ಒಳ್ಳೆಯ ಹೆಸರು ಮಾಡಿದೆ. ಇಂದಿನ ದಿನಗಳಲ್ಲಿ ಹಲವು ಆಸ್ಪತ್ರೆಗಳು ವ್ಯಾಪಾರಿಕರಣದಲ್ಲಿ ಮುಳುಗಿದ್ದು, ಇಂತಹ ಸಮಯದಲ್ಲಿ ಕೂಡ ಈ ರೀತಿಯ ಆಸ್ಪತ್ರೆ ಗಳು ತಮ್ಮ ಬಿಸಿನೆಸ್ ಗೆ ಗಮನ ನೀಡದೆ ಮಾನವೀಯತೆ ಮುಂದಾಗಿರುವುದು ಶ್ಲಾಘನೀಯ ಎಂದರು.
ಮಾಜಿ ಸಚಿವ ಕೆ ಗೋಪಾಲಯ್ಯ ಮಾತನಾಡಿ, ಆಸ್ಪತ್ರೆ ಕೋವಿಡ್ ಸಂದರ್ಭದಲ್ಲಿ 24 ಗಂಟೆ ಕೆಲಸ ಮಾಡಿ ಹಲವಾರು ಕರೋನಾ ರೋಗಿಗಳಿಗೆ ಜೀವ ಉಳಿಸಿದೆ. ನಾನು ಮತ್ತು ಪ್ರಸನ್ನ ಡಾಕ್ಟರ್ ಮತ್ತು ನಾಗೇಂದ್ರ ಡಾಕ್ಟರ್ ಅವರ ತಂಡ ಕಟ್ಟಿಕೊಂಡು ಅವಿರತವಾಗಿ ಕೆಲಸ ನಿರ್ವಹಿಸಿ ರೋಗಿಗಳಿಗೆ ಯಾವುದೇ ತೊಂದರೆಗಳು ಬಾರದಂತೆ ಮುಂಜಾಗ್ರತೆ ವಹಿಸಲಾಗಿತ್ತು ಎಂದು ಸ್ಮರಿಸಿದರು.
ಆಸ್ಪತ್ರೆ ಎಂಡಿ ಡಾ, ಪ್ರಸನ್ನ ಹಾಗೂ ಇನ್ನಿತರರಿಗೆ ಸನ್ಮಾನ ನಡೆಸಲಾಯಿತು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್ ಎಂ ರೇವಣ್ಣ, ಮಾಜಿ ಶಾಸಕ ನರೇಂದ್ರ ಬಾಬು, ಹಿರಿಯ ಪ್ರಾಧ್ಯಾಪಕ ಕೆ ಇ ರಾಧಾಕೃಷ್ಣ, ರಾಜ್ಯ ಖಾಸಗಿ ಆಸ್ಪತ್ರೆಗಳ ಸಂಘದ ಅಧ್ಯಕ್ಷ ಗೋವಿಂದಯ್ಯ ಸತೀಶ್, ಡಾ, ಬಾಲಚಂದ್ರ , ಡಾ, ಲಕ್ಷ್ಮೀ ನಾರಾಯಣ, ಅನಂತ್ ಕಿಶನ್ ಆಸ್ಪತ್ರೆ ಮಾನವ ಸಂಪನ್ಮೂಲ ವಿಭಾಗದ ರಶ್ಮಿ ಸೇರಿ ಸಿಬ್ಬಂದಿ ಪಾಲ್ಗೊಂಡಿದ್ದರು.


