ಕ್ರೀಡೆ ಸುದ್ದಿ

ಆರ್.ಸಿಬಿ ಹೊಸ ನಾಯಕನಿಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಭಿಮಾನಿಗಳ ಸ್ವಾಗತ.!

Share It

ಬೆಂಗಳೂರು: ಸೆಪ್ಟೆಂಬರ್ 5 ರಿಂದ ಆರಂಭವಾಗಿರುವ ದುಲೀಪ್ ಕ್ರಿಕೆಟ್ ಟ್ರೋಫಿಯಲ್ಲಿ ಮೊದಲ ಪಂದ್ಯ ಭಾರತ ಎ ಮತ್ತು ಭಾರತ ಬಿ ತಂಡಗಳ ನಡುವೆ ಬೆಂಗಳೂರಿನ ಎಂ.‌ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈಗಾಗಲೇ ಈ ಪಂದ್ಯದಲ್ಲಿ ಉಭಯ ತಂಡಗಳೂ ಮೊದಲ ಇನ್ನಿಂಗ್ಸ್ ಮುಗಿಸಿದ್ದು, ಇದೀಗ 2ನೇ ಇನ್ನಿಂಗ್ಸ್ ಚಾಲ್ತಿಯಲ್ಲಿದೆ. ಇದೇ ಪಂದ್ಯದಲ್ಲಿ ಭಾರತ ಎ ತಂಡದ ಭಾಗವಾಗಿರುವ ಕನ್ನಡಿಗ ಕೆ.ಎಲ್ ರಾಹುಲ್ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಸಲುವಾಗಿ ಉತ್ತಮ ಪ್ರದರ್ಶನ ನೀಡುವ ಇರಾದೆಯಲ್ಲಿದ್ದಾರೆ. ಆದರೆ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ರಾಹುಲ್​ಗೆ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಮೊದಲ ಇನ್ನಿಂಗ್ಸ್​ನಲ್ಲಿ ರಾಹುಲ್, ಕ್ರೀಸ್​ನಲ್ಲಿ ಹಲವು ಸಮಯ ಕಳೆದರಾದರೂ, ಅರ್ಧಶತಕದ ಇನ್ನಿಂಗ್ಸ್ ಸಹ ಆಡಲು ಸಾಧ್ಯವಾಗಲಿಲ್ಲ. ಮೊದಲ ಇನ್ನಿಂಗ್ಸ್​ನಲ್ಲಿ 111 ಎಸೆತಗಳನ್ನು ಎದುರಿಸಿದ ರಾಹುಲ್ ಕೇವಲ 37 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.​

ಅಭಿಮಾನಿಗಳ ಘೋಷಣೆ…
ಆದರೆ ತವರು ನೆಲದಲ್ಲಿ ಪಂದ್ಯವನ್ನಾಡುತ್ತಿರುವ ಕೆ.ಎಲ್ ರಾಹುಲ್​ಗೆ ಅಭಿಮಾನಿಗಳ ಭರಪೂರ ಬೆಂಬಲ ಸಿಗುತ್ತಿದೆ. ಕೆ.ಎಲ್ ರಾಹುಲ್ ಮೈದಾನಕ್ಕೆ ಕಾಲಿಟ್ಟ ಕೂಡಲೇ ಅಭಿಮಾನಿಗಳ ಘೋಷಣೆ ಮುಗಿಲು ಮುಟ್ಟುತ್ತಿದೆ. ಅಂತಹದ್ದೇ ಘಟನೆಯೊಂದು ಈ ಪಂದ್ಯದ ಸಮಯದಲ್ಲಿ ನಡೆದಿದ್ದು, ಕೆ.ಎಲ್ ರಾಹುಲ್ ಮೈದಾನಕ್ಕೆ ಕಾಲಿಟ್ಟ ಕೂಡಲೇ ಅಭಿಮಾನಿಗಳೆಲ್ಲ ‘ಆರ್​ಸಿಬಿ ನಾಯಕ ಕೆ.ಎಲ್ ರಾಹುಲ್’ ಎಂದು ಘೋಷಣೆ ಕೂಗಲು ಆರಂಭಿಸಿದ್ದಾರೆ. ಇದೀಗ ಅದರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಲಕ್ನೋ ತೊರೆಯುತ್ತಾರಾ ಕೆ.ಎಲ್ ರಾಹುಲ್?
ವಾಸ್ತವವಾಗಿ, ಇತ್ತೀಚೆಗಷ್ಟೇ ಕೆ.ಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತೊರೆಯುತ್ತಾರೆ ಎಂಬ ವದಂತಿ ಹಬ್ಬಿತ್ತು. ಹಾಗೆಯೇ ಕೆ.ಎಲ್ ರಾಹುಲ್ ತಮ್ಮ ಮಾತೃ ತಂಡವಾದ ಆರ್​​ಸಿಬಿ ಫ್ರಾಂಚೈಸಿಯನ್ನು ಸೇರಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಜೋರಾಗಿ ಹಬ್ಬಿತ್ತು. ಹಾಗಾಗಿ ಈ ಸುದ್ದಿ ನಿಜವಾಗಲೆಂದು ಬಯಸಿರುವ ಅಭಿಮಾನಿಗಳು, ಕೆಎಲ್ ರಾಹುಲ್ ಆರ್​ಸಿಬಿ ತಂಡವನ್ನು ಸೇರಿಕೊಳ್ಳಲಿ ಎಂದು ಆಶಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಐಪಿಎಲ್ ಮೆಗಾ ಹರಾಜು ಬರಲಿದ್ದು, ಒಂದು ವೇಳೆ ರಾಹುಲ್​ರನ್ನು ಲಕ್ನೋ ತಂಡ ಉಳಿಸಿಕೊಳ್ಳದಿದ್ದರೆ, ಹರಾಜಿನಲ್ಲಿ ಕೆ.ಎಲ್ ರಾಹುಲ್ ಯಾವ ತಂಡವನ್ನು ಸೇರಿಕೊಳ್ಳುತ್ತಾರೆ ಎಂಬುದು ಖಚಿತವಾಗಲಿದೆ.


Share It

You cannot copy content of this page