ರಾಜಕೀಯ ಸುದ್ದಿ

ಚಾಮುಂಡೇಶ್ವರಿ ಪ್ರಾಧಿಕಾರದಿಂದ ರಾಜಮನೆತನದ ಪರಂಪರೆಗೆ ಧಕ್ಕೆ: ಸಂಸದ ಯದುವೀರ್ ಒಡೆಯರ್

Share It

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮಂಗಳವಾರ ನಡೆದ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆ ನಿಯಮ ಬಾಹಿರವಾದುದು ಎಂದು ಬಿಜೆಪಿ ಸಂಸದ ಹಾಗೂ ಮೈಸೂರು ರಾಜವಂಶಸ್ಥ ಯಧುವೀರ್ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಈ ಬಗ್ಗೆ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಧಿಕಾರದ ರಚನೆ ಹಾಗೂ ಸಭೆ ರಾಜವಂಸ್ಥಸರ ನಂಬಿಕೆ, ಆಚರಣೆ ಪರಂಪರೆಗೆ ಧಕ್ಕೆ ಉಂಟು ಮಾಡಿದೆ. ನಮ್ಮ ಹಕ್ಕನ್ನು ನಾವು ಯಾವತ್ತೂ ಬಿಟ್ಟು ಕೊಡುವುದಿಲ್ಲ. ಬೆಟ್ಟವನ್ನು ನಿಯಂತ್ರಿಸಲು ರಾಜ್ಯಸರ್ಕಾರ ಪ್ರಾಧಿಕಾರ ರಚನೆ ಮಾಡುತ್ತಿದೆ ಎಂದರು.

ದೇವಸ್ಥಾನದ ಹುಂಡಿ ಹಣ ಆಯಾ ದೇವಸ್ಥಾನದ ಅಭಿವೃದ್ಧಿಗೆ ಬಳಕೆ ಆಗಬೇಕು. ಹಿಂದೂ ದೇವಾಲಯಗಳ ಮೇಲೆ ಏಕೆ ರೀತಿ ಮಾಡಲಾಗುತ್ತಿದೆ. ಪ್ರಾಧಿಕಾರ ರಚನೆಯಾದರೆ ನಮ್ಮ ಆಚರಣೆಗೂ ಅಡ್ಡಿಯಾಗುತ್ತದೆ. ಈ ಸಂಬಂಧ ಕಾನೂನು ಹೋರಾಟ ಮುಂದುವರಿಯಲಿದೆ ಎಂದು ಯದುವೀರ್ ಒಡೆಯರ್ ಹೇಳಿದರು.

ತಡೆಯಾಜ್ಞೆ ನಡುವೆಯೂ ಸಭೆ ನಡೆಸುತ್ತಿರುವುದು ನ್ಯಾಯಾಂಗ ನಿಂದನೆ ಆಗುತ್ತದೆ. ನ್ಯಾಯಾಂಗ ನಿಂದನೆಗೆ ಒಳಪಡುವ ಸಭೆಗೆ ನಾನು ಹೋಗುವುದಿಲ್ಲ. ಪ್ರಾಧಿಕಾರ ರಚನೆ ಸಂಬಂಧ ಸೆಪ್ಟೆಂಬರ್​​ 5 ರವರೆಗೆ ತಡೆಯಾಜ್ಞೆ ಇರುವುದು ಸತ್ಯ. ಮುಖ್ಯಮಂತ್ರಿಗಳು ಹೇಗೆ ತಡೆಯಾಜ್ಞೆ ತೆರವಾಗಿದೆ ಎಂದು ಹೇಳಿದರೊ ಗೊತ್ತಿಲ್ಲ ಎಂದು ಮೈಸೂರು ಬಿಜೆಪಿ ಸಂಸದ ಯದುವೀರ್ ಒಡೆಯರ್ ಅಸಮಾಧಾನ ಹೊರಹಾಕಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ಆಕ್ಷೇಪ ವ್ಯಕ್ತಪಡಿಸಿ ಪ್ರಮೋದಾದೇವಿ ಒಡೆಯರ್​ ಜುಲೈ 26 ರಂದು ತಡೆಯಾಜ್ಞೆ ತಂದಿದ್ದರು. ಈ ತಡೆಯಾಜ್ಞೆ ತೆರವುಗೊಳಿಸುವಂತೆ ರಾಜ್ಯಸರ್ಕಾರ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದೆ. ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ, ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸರ್ಕಾರ ಜೂನ್​ 28 ರಂದು ಆದೇಶ ಹೊರಡಿಸಿತ್ತು.

ಜುಲೈ 1 ರಿಂದಲೇ ಕಾಯ್ದೆ ಜಾರಿಗೆ ಬಂದಿದೆ. ಹೀಗಾಗಿ ತಡೆಯಾಜ್ಞೆ ಮಧ್ಯಂತರ ಆದೇಶ ತೆರವು ಮಾಡಬೇಕು ಎಂದು ಮನವಿ ಮಾಡಿದರು. ಪ್ರಮೋದಾದೇವಿ ಒಡೆಯರ್​ ಪರ ವಕೀಲರು ಮತ್ತೆ ಮಧ್ಯಂತರ ಆದೇಶವನ್ನು ನೀಡಬೇಕು ಎಂದು ಕೋರಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಪ್ರಕರಣ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಒಡೆಯರ್​ ಪರ ವಕೀಲರಿಗೆ ಸೂಚನೆ ನೀಡಿ, ವಿಚಾರಣೆಯನ್ನು ಸೆಪ್ಟೆಂಬರ್​ 5ಕ್ಕೆ ಮುಂದೂಡಿದೆ.


Share It

You cannot copy content of this page