ಬೆಂಗಳೂರು: ಹೋಂ ಮಿನಿಸ್ಟರ್ ಅಂದ್ರೆ ಖಡಕ್ ಆಗಿ ಇರ್ಬೇಕು, ಪರಮೇಶ್ವರ್ ಮಾತಡೋಕೆ ಕಷ್ಟಪಡುತ್ತಾರೆ. ಹೀಗಾಗಿ ಅವರು ಹೋಂ ಮಿನಿಸ್ಟರ್ ಆಗಿ ಸಕ್ಸಸ್ ಆಗಲ್ಲ ಎನ್ನೋದು ಬಹುತೇಕರ ಅಭಿಮತವಾಗಿತ್ತು.
ಖಡಕ್ ಆಗಿರೋ ಡಿಕೆಶಿ ಹೋಂ ಮಿನಿಸ್ಟರ್ ಆಗಲಿ ಅನ್ನೋದು ಕೆಲವರ ಅಭಿಮತವಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದಾಗ ಯತ್ನಾಳ್ ಹೋಂ ಮಿನಿಸ್ಟರ್ ಆಗಲಿ ಅನ್ನೋ ಒಂದು ದೊಡ್ಡ ವರ್ಗವೂ ಇದೆ. ಆದರೆ, ಇವರ್ಯಾರು ಹೋಂ ಮಿನಿಸ್ಟರ್ ಆಗಲು ಸಾಧ್ಯವಿಲ್ಲ. ಆದರೂ, ಹಂಡ್ರೆಡ್ ಪರ್ಸೆಂಟ್ ಸಕ್ಸಸ್ ಆಗಲ್ಲ.
ಅಷ್ಟೇ ಯಾಕೆ ಗತ್ತು ಗೈರತ್ತು ತೋರೋ ಅದ್ಯಾವ ಹೋಂ ಮಿನಿಸ್ಟರ್ ಹಿಂದಿನ ಸರಕಾರದಲ್ಲಿ ಸಕ್ಸಸ್ ಆಗಿದ್ದಾರೆ ಅಂತ ನೋಡಿದ್ರೆ, ಕರ್ನಾಟಕದಲ್ಲಿ ಕೇಳಿ ಬರೋ ಹೆಸರುಗಳು ಅಂದ್ರೆ ಖರ್ಗೆ, ರಾಮಲಿಂಗಾ ರೆಡ್ಡಿ, ಬೊಮ್ಮಾಯಿ ಮತ್ತು ಪರಮೇಶ್ವರ್ ಮಾತ್ರ. ಆರ್.ಅಶೋಕ್ ಕೂಡ ಹೋಂ ಮಿನಿಸ್ಟರ್ ಆಗಿ ಫೇಲ್ ಆದವರೇ ಅನ್ನೋದು ನೆನಪಿರಲಿ.
ಅಷ್ಟಕ್ಕೂ ಡಾ.ಜಿಮ ಪರಮೇಶ್ವರ್, ಹೋಂ ಮಿನಿಸ್ಟರ್ ಖಾತೆ ನಿಭಾಯಿಸುತ್ತಿರುವುದು ಎರಡನೇ ಬಾರಿ. ಅವರು ಸೈಲೆಂಟ್ ಆಗಿದ್ದುಕೊಂಡೇ ಅಧಿಕಾರಿಗಳ ಗೌರವ ಸಂಪಾದನೆ ಮಾಡಿಕೊಳ್ಳುತ್ತಾರೆ. ಅವರು ಹೋಂ ಆಗಿದ್ದಾಗ ಸಿಎಂ ಬೇಕಾಬಿಟ್ಟಿ ಡಾಮಿನೇಟ್ ಮಾಡ್ತಾರೆ ಅನ್ನೋ ಆರೋಪವಿದೆ. ಆದರೆ, ಅದನ್ನೂ ಸೈಲೆಂಟ್ ಆಗಿಯೇ ನಿಭಾಯಿಸೋ ಶಕ್ತಿ ಪರಂಗಿದೆ.
ಇತ್ತೀಚೆಗಂತೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಬಾರಿ ಚರ್ಚೆ ನಡೆಯುತ್ತಿದೆ. ಇದನ್ನು ವೈಫಲ್ಯ ಎಂದು ಹೇಳಬೇಕೋ ಅಥವಾ ಸಕ್ಸಸ್ ಎಂದು ಹೇಳಬೇಕೋ ಎಂಬ ಗೊಂದಲಲ್ಲಿಯೇ ವಿರೋಧಿಗಳು ಮಾತನಾಡಬೇಕು. ಯಾಕಂದ್ರೆ, ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ಬೆಳಕಿಗೆ ಬಂದಷ್ಟು ಕಾನೂನು ಸುವ್ಯವಸ್ಥೆ ಸವಾಲುಗಳು ಹಿಂದೆಂದೂ ಎದುರಾಗಿರಲಿಲ್ಲ ಎಂದೇ ಹೇಳಬಹುದು.
ಕಳೆದೊಂದು ವರ್ಷದಲ್ಲಿ ಒಬ್ಬ ಸೂಪರ್ ಸ್ಟಾರ್ ನಟನನ್ನು ಬಂಧಿಸಲಾಗಿತ್ತು. ಆತನಿಗಿದ್ದ ಅಭಿಮಾನಿ ವರ್ಗ ಅತ್ಯಂತ ದೊಡ್ಡ ಮತ್ತು ಅಪಾಯಕಾರಿಯಾಗಿತ್ತು. ಆದರೂ, ಒಂದೂ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ವ್ಯವಸ್ಥೆ ಅದನ್ನು ನಿಭಾಯಿಸಿದೆ ಎಂದರೆ ಇದು ಗೃಹಸಚಿವರ ಸಕ್ಸಸ್ ಅಲ್ಲದೇ ಮತ್ತೇನು?
ಈ ಅವಧಿಯಲ್ಲಿ ಒಬ್ಬ ಸಚಿವ ಒಬ್ಬ ಸಂಸದ, ಇಬ್ಬರು ಶಾಸಕರು, ಒಬ್ಬ ವಿಧಾನಪರಿಷತ್ ಸದಸ್ಯ ಮತ್ತೊಬ್ಬರು ಮಾಜಿ ವಿಧಾನ ಪರಿಷತ್ ಸದಸ್ಯರ ಬಂಧನವಾಗಿದೆ ಎಂದರೆ, ಇದು ಕಾನೂನು ಸುವ್ಯವಸ್ಥೆ ಸೋಲೋ ಗೆಲುವೋ ಯೋಚಿಸಿನೋಡಿ.
ಶಿವಮೊಗ್ಗ ಗಲಭೆ, ದರ್ಶನ್ ಬಂಧನ, ವಾಲ್ಮೀಕಿ ಹಗರಣದಲ್ಲಿ ಹಾಲಿ ಸಚಿವ ನಾಗೇಂದ್ರ ಬಂಧನ, ನಾಗಮಂಗಲ ಘಟನೆ, ಹಾಸನ ಪೆನ್ ಡ್ರೈವ್ ಪ್ರಕರಣದಲ್ಲಿ ಹಾಲಿ ಸಂಸದರಾಗಿದ್ದ, ಪ್ರಜ್ವಲ್ ರೇವಣ್ಣ ಬಂಧನ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಬಂಧನ, ಪ್ರಭಾವಿ ಮಾಜಿ ಸಚಿವ ರೇವಣ್ಣ ಬಂಧನ, ಮತ್ತೊಬ್ಬ ಮಾಜಿ ಸಚಿವ, ಶಾಸಕ ಮುನಿರತ್ನ ಬಂಧನಗಳೆಲ್ಲವೂ ಪರಮೇಶ್ವರ್ ಹೋಂ ಮಿನಿಸ್ಟರ್ ಆಗಿದ್ದಾಗಲೇ ಎಂಬುದು ಗಮನಾರ್ಹ. ಇಷ್ಟಾಗಿಯೂ ಅವರನ್ನು ಅಸಮರ್ಥ ಗೃಹಮಂತ್ರಿ ಎನ್ನುವುದು ಮೂರ್ಖತನ.
ಜತೆಗೆ ಇಂತಹ ಘಟನೆಗಳು ನಡೆದಾಗ ಅವರು ಪ್ರತಿಕ್ರಿಯಿಸುವ ರೀತಿ ಪೊಲೀಸ್ ವ್ಯವಸ್ಥೆ ಗೆ ಅಗತ್ಯವಾಗಿ ಬೇಕಿರುವ ಟಾನಿಕ್. ಉದ್ರೇಕದಿಂದ ಮಾತನಾಡುವವರೆಲ್ಲ ಉತ್ತಮ ಹೋಂ ಮಿನಿಸ್ಟರ್ ಆಗಲು ಸಾಧ್ಯವಿಲ್ಲ. ಮುನಿರತ್ನ ಬಂಧನವಾಗಿರುವುದೇ ಡಾ.ಜಿ.ಪರಮೇಶ್ವರ್ ಪ್ರತಿನಿಧಿಸುವ ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರಿಂದ. ಆದರೆ, ಪರಮೇಶ್ವರ್ ಎಲ್ಲಿಯೂ ನಮ್ಮ ಸಮುದಾಯದ ವಿರುದ್ಧ ಮಾತನಾಡಿದ್ದಾರೆ ಎಂದು ಹೇಳಿಲ್ಲ. ಜಾಣ್ಮೆಯಿಂದ ನಡೆದುಕೊಂಡಿದ್ದಾರೆ. ಇಷ್ಟಾಗಿಯೂ, ದ್ವನಿ ಪರೀಕ್ಷೆಯಲ್ಲಿ ಮುನಿರತ್ನ ಮಾತನಾಡಿರುವುದು ಸಾಭೀತಾದರೆ ಕಾನೂನು ಪ್ರಕಾರ ಶಿಕ್ಷೆಯಾಗಲಿದೆ ಎಂದಷ್ಟೇ ಹೇಳಿದ್ದಾರೆ.
ಆ ಜಾಗದಲ್ಲಿ ಮತ್ಯಾವುದೋ ಫೈರ್ ಬ್ರ್ಯಾಂಡ್ ಹೋಂ ಮಿನಿಸ್ಟರ್ ಇದ್ದು, ಅವರ ಸಮುದಾಯಕ್ಕೆ ಅವಮಾನವಾಗಿದ್ದರೆ, ಒದ್ದು ಒಳಗಾಕ್ತೀವಿ, ಬಡೀತೀವಿ, ಹೊಡಿತೀವಿ, ನಮ್ಮ ಸಮುದಾಯ ದಂಗೆ ಏಳುತ್ತೇ, ಬೆಂಕಿ ಇಡ್ತೀವಿ ಎಂಬಿತ್ಯಾದಿ ಹೇಳಿಕೆಗಳು ಬರ್ತಿದ್ದವು. ಆದರೆ, ಪರಮೇಶ್ವರ್ ಪ್ರಬುದ್ಧತೆ ಇಲ್ಲಿ ಎದ್ದು ಕಾಣ್ತಿದೆ. ಹೀಗಾಗಿಯೇ, ಸಿಎಂ ಬದಲಾವಣೆ ಸಂದರ್ಭ ಬಂದರೆ ಹೈಕಮಾಂಡ್ ಆಯ್ಕೆ ಪರಮೇಶ್ವರ್ ಕಡೆಗಿದೆ.

