ಬೆಂಗಳೂರು: ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ಬಿಹಾರ ಮೂಲದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದು, ಇದರಿಂದ ಕೆಲ ಕಾಲ ಮೆಟ್ರೋ ಸಂಚಾರ ಸ್ಥಗಿತವಾಗಿತ್ತು.
ಬಿಹಾರ ಮೂಲದ ಸಿದ್ಧಾರ್ಥ್ ಎಂಬ 30 ವರ್ಷದ ವ್ಯಕ್ತಿಯೊಬ್ಬ ಮಧ್ಯಾಹ್ನ 2.15 ರ ಸುಮಾರಿನಲ್ಲಿ ಮೆಟ್ರೋ ಹಳಿಯ ಮೇಲೆ ಜಿಗಿದಿದ್ದಾನೆ. ಇದರಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ತಕ್ಷಣವೇ ಎಮರ್ಜೆನ್ಸಿ ಟ್ರಿಪ್ ಸಿಸ್ಟಮ್ ಮೂಲಕ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದು, ವ್ಯಕ್ತಿ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ಇದರಿಂದಾಗಿ ಚಲ್ಲಘಟ್ಟ ಮತ್ತು ಬಯ್ಯಪ್ಪನಹಳ್ಳಿ ನಡುವಿನ ಮೆಟ್ರೋ ಸಂಚಾರ ಅರ್ಧ ಗಂಟೆ ಸ್ಥಗಿತವಾಗಿತ್ತು.
ಹಳಿಗೆ ಹಾರಿದ್ದ ಸಿದ್ಧಾರ್ಥನ ಪ್ರಾಣ ಉಳಿಸಲು ಮೆಟ್ರೋ ಸಿಬ್ಬಂದಿ ನಡೆಸಿದ ಕಾರ್ಯಾಚರಣೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಸೆಕ್ಯುರಿಟಿ ಸಿಬ್ಬಂದಿ ಶೃತಿ ಎಮೆರ್ಜೆನ್ಸಿ ಬಟನ್ ಅನ್ನು ಹ್ಯಾಮರ್ ಬದಲಿಗೆ ಕೈಯ್ಯಿಂದಲೇ ಮುರಿದು ಸ್ವಿಚ್ ಆಫ್ ಮಾಡಿದ್ದಾರೆ. ಶೃತಿಯವರ ಕೈಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೈಗೆ ಗಾಜಿನ ಚೂರುಗಳು ಚುಚ್ಚಿಕೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಶೃತಿಯವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.