ಬೆಂಗಳೂರು: ಸಿಎಂ ಬದಲಾವಣೆ, ದಲಿತ ಸಿಎಂ ಕೂಗುಗಳೆಲ್ಲದರ ನಡುವೆ ದಲಿತ ಸಚಿವರೆಲ್ಲ ಒಂದಾಗುತ್ತಿರುವುದು ರಾಜ್ಯ ರಾಜಕಾರಣದ ದಿಕ್ಕನ್ನು ಬದಲಾಯಿಸುವಂತೆ ಕಾಣುತ್ತಿದೆ. ಇದೀಗ ದಲಿತ ಸಚಿವರ ಗುಂಪಿಗೆ ಡಾ. ಜಿ ಪರಮೇಶ್ವರ್ ಹೆಡ್ ಎನಿಸಿಕೊಳ್ಳುತ್ತಿದ್ದಾರೆ.
ವಾಲ್ಮೀಕಿ ಜಾತ್ರೆಯ ನೆಪದಲ್ಲಿ ದಲಿತ ಸಚಿವರೆಲ್ಲ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆ ಮೂಲಕ ತಮ್ಮೆಲ್ಲ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. “ನಾವು ಅಂದುಕೊAಡಿದ್ದನ್ನ ಮಾಡಿಯೇ ಮಾಡ್ತೀವಿ” ಎಂದು ಸಚಿವ ಕೆ.ಎನ್ ರಾಜಣ್ಣ ಪರೋಕ್ಷ ಸಂದೇಶ ಕೊಟ್ಟಿದ್ದಾರೆ.
ಅದೇ ಕಾರ್ಯಕ್ರಮದಲ್ಲಿ ಮಾತನಾಡಿದ ಎಚ್.ಸಿ.ಮಹದೇವಪ್ಪ, ಎಸ್ಸಿ, ಎಸ್ಟಿ ಸಮುದಾಯಗಳು ಒಂದಾದರೆ ನಮ್ಮನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ. ಅಧಿಕಾರ ತಾನಾಗಿಯೇ ಬರುತ್ತದೆ ಎಂದು ಮಾತನಾಡುವ ಮೂಲಕ ತಾವು ಮಾಡುತ್ತಿರುವುದೇನು ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ.
ಇನ್ನೂ ಮೊದಲಿಗೆ ಈ ಎಲ್ಲ ಬೆಳವಣಿಗೆಯ ಮೂಲವಾಗಿದ್ದ ಸಚಿವ ಸತೀಶ್ ಜಾರಕಿಹೊಳಿ, ದಲಿತ ನಾಯಕರೆಲ್ಲರೂ ಒಗ್ಗಟ್ಟಾಗಿದ್ದೇವೆ. ಡಾ. ಪರಮೇಶ್ವರ್ ನಮ್ಮೆಲ್ಲರ ಹೆಡ್ ಎನ್ನುವ ಮೂಲಕ ತಮ್ಮೆಲ್ಲರ ಉದ್ದೇಶವೇನು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಆ ಮೂಲಕ ದಲಿತ ಸಿಎಂ ಕೂಗು ಇರುವುದು ಮತ್ತು ಅದಕ್ಕೆ ಪರಮೇಶ್ವರ್ ಹೆಸರು ಚಾಲ್ತಿಯಲ್ಲಿರುವ ಕುರಿತು ಎಲ್ಲ ಸಚಿವರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ದಲಿತ ನಾಯಕರ ಪೈಕಿ ಪರಮೇಶ್ವರ್ ಹೆಸರು ಬಂದ್ರೆ ಹೈಕಮಾಂಡ್ ಕೂಡ ಸೈಲೆಂಟ್ ಆಗುತ್ತೆ. ಕಾರಣ ಹಿಂದೆ ಪರಮೇಶ್ವರ್ ತಮ್ಮ ಸಿಎಂ ಸ್ಥಾನ ತ್ಯಾಗ ಮಾಡಿದ್ದವರು. ಜತೆಗೆ ಮೂಲ ಕಾಂಗ್ರೆಸ್ಸಿಗರು. ಇತ್ತ ಮೂಲ ಕಾಂಗ್ರೆಸ್ ಶಾಸಕರ ಹಾಗೂ ಸಿದ್ದರಾಮಯ್ಯ ಬೆಂಬಲಿಗ ಶಾಸಕರಿಬ್ಬರ ಬೆಂಬಲವೂ ಪರಮೇಶ್ವರ್ ಅವರಿಗಿದೆ. ಹೀಗಾಗಿ ಅವರನ್ನೇ ಮುಂಚೂಣಿಗೆ ತರುವ ಪ್ರಯತ್ನ ನಡೆಯುತ್ತಿದೆ.