ಉಪಯುಕ್ತ ಸುದ್ದಿ

ದಾರಿ ತಪ್ಪಿಸಿದ ಗೂಗಲ್ ಮ್ಯಾಪ್ : ರಾತ್ರಿಯಿಡೀ ಕಾಡಿನಲ್ಲಿ ಸಿಲುಕಿದ ಪ್ರವಾಸಿಗರು

Share It

ಬೆಳಗಾವಿ : ಗೂಗಲ್ ಮ್ಯಾಪ್ ಆಗಾಗ ಪ್ರಯಾಣಿಕರ ಹಾದಿಯನ್ನು ತಪ್ಪಿಸಿ ಅನಾಹುತ ನಡೆಯುವ ಘಟನೆ ವರದಿಯಾಗುತ್ತಿದೆ. ಈ ನಡುವೆ ಬೆಳಗಾವಿ ಜಿಲ್ಲೆಯಲ್ಲೂ ಗೂಗಲ್ ಪ್ರಯಾಣಿಕರ ಹಾದಿ ತಪ್ಪಿಸಿದ ಘಟನೆ ಬೆಳಕಿಗೆ ಬಂದಿದೆ.

ರಸ್ತೆ ತಿಳಿಯದೆ ಗೂಗಲ್ ಮ್ಯಾಪ್ ನಂಬಿದ್ದಕ್ಕೆ ಕುಟುಂಬವೊಂದು ಕಾಡಿನಲ್ಲೇ ರಾತ್ರಿ ಕಳೆದ ಘಟನೆ ಖಾನಾಪುರದಲ್ಲಿ ನಡೆದಿದೆ.

ಬಿಹಾರದ ರಾಜದಾಸ್ ರಣಜಿತ್ ದಾಸ್ ಕುಟುಂಬ ಉಜ್ಜಯಿನಿಯಿಂದ ಗೋವಾ ಪ್ರವಾಸಕ್ಕೆ ಹೊರಟಿತ್ತು. ಗೋವಾದಲ್ಲಿ ತಲುಪಬೇಕಿದ್ದ ಸ್ಥಳದ ಲೊಕೇಶನ್ ಹಾಕಿ ಪ್ರಯಾಣ ಬೆಳೆಸಿದ್ದರು.

ಗೂಗಲ್ ಮ್ಯಾಪ್ ಪ್ರಕಾರವೇ ಹೋಗುತ್ತಿದ್ದ ಅವರು ದಾರಿ ಸಾಗಿದಂತೆ ಶಿರೋಲಿ ಮತ್ತು ಹೆಮ್ಮಡಗಾ ಮಾರ್ಗಮಧ್ಯದ ಮುಖ್ಯ ರಸ್ತೆಯಿಂದ 7-8 ಕಿಮೀ ಒಳಗೆ ಭೀಮಗಡ ವನ್ಯಧಾಮದ ಅರಣ್ಯದೊಳಗೆ ಹೊಕ್ಕಿದ್ದಾರೆ. ಕಗ್ಗತ್ತಲ ಕಾಡಿನಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗದೇ ದಟ್ಟ ಅರಣ್ಯದಲ್ಲಿ ಹಾದಿ ತಪ್ಪಿ ಕುಟುಂಬ ಸಿಲುಕಿಕೊಂಡಿದೆ.

ಇದರಿಂದ ಕಂಗೆಡದ ರಾಜದಾಸ್ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿ ರಾತ್ರಿ ಅಲ್ಲೇ ಕಳೆದಿದ್ದಾರೆ. ಜೀವ ಕೈಯಲ್ಲಿ ಹಿಡಿದು ರಾತ್ರಿ ಕಳೆದ ಕುಟುಂಬ, ಬೆಳಗಾಗುತ್ತಲೇ ತಾವಿದ್ದ ಸ್ಥಳದಿಂದ ಮೂರ್ನಾಲ್ಕು ಕಿಲೋಮೀಟರ್ ಕ್ರಮಿಸಿ, ಮೊಬೈಲ್ ನೆಟ್ವರ್ಕ್ ದೊರೆತ ಬಳಿಕ ಅವರು 100 ಸಂಖ್ಯೆಗೆ ಕರೆ ಮಾಡಿ ಪೊಲೀಸ್ ಕಂಟ್ರೋಲ್ ರೂಂ ಜತೆ ಸಂಪರ್ಕ ಸಾಧಿಸಿ ವಿಚಾರ ಹೇಳಿದ್ದಾರೆ. ತಕ್ಷಣ ಕುಟುಂಬದ ಸಹಾಯಕ್ಕೆ ನೆರವಾದ ಖಾನಾಪುರ ಪೊಲೀಸರು ಕುಟುಂಬವನ್ನು ರಕ್ಷಿಸಿದ್ದಾರೆ.


Share It

You cannot copy content of this page