ರಾಮನಗರಕ್ಕೆ ರಾಜೀವ್‌ಗಾಂಧಿ ವಿಶ್ವವಿದ್ಯಾಲಯ ಸ್ಥಳಾಂತರ: ಡಿಕೆಶಿ

Share It

ಬೆಂಗಳೂರು: ರಾಮನಗರ ಕ್ಯಾಂಪಸ್‌ಗೆ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಸ್ಥಳಾಂತರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.

ರಾಮನಗರ ಮತ್ತು ಕನಕಪುರದಲ್ಲಿ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸುವ ಕುರಿತು ಬುಧವಾರ ಸಭೆ ನಡೆಸಿದ ಬಳಿಕ ತಿಳಿಸಿದರು.

ರಾಮನಗರ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಕಾಮಗಾರಿ ನಡೆಯುತ್ತಿದೆ. ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಹಿಂದಿನ ಸರ್ಕಾರದ ಆದೇಶದಂತೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ರಾಮನಗರಕ್ಕೆ ಸ್ಥಳಾಂತರಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

ಕನಕಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸಲು ಬಜೆಟ್’ನಲ್ಲಿ ಘೋಷಣೆ ಮಾಡಲಾಗಿತ್ತು. ಗೃಹ ಮಂಡಳಿಯಿಂದ ಜಮೀನು ಪಡೆದು ಕಾಲೇಜು ಕಟ್ಟಡ ನಿರ್ಮಾಣ ಮಾಡಲಾಗುವುದು. ಕನಕಪುರದಲ್ಲಿ ಮೂಲಸೌಕರ್ಯ ಇಲ್ಲ ಎಂದು ಎನ್ಎಂಸಿಯಿಂದ ಅರ್ಜಿ ತಿರಸ್ಕರಿಸಲಾಗಿತ್ತು. ಹೀಗಾಗಿ ಮೂಲಸೌಕರ್ಯ ನೀಡಿ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಹಿಂದೆ ಕನಕಪುರದಲ್ಲಿ ಮೆಡಿಕಲ್ ಕಾಲೇಜು ಆರಂಭಿಸಲು ಟೆಂಡರ್ ಕರೆದು ಭೂಮಿ ಪೂಜೆ ಮಾಡಲಾಗಿತ್ತು. ನಂತರ ಯಡಿಯೂರಪ್ಪನವರ ಸರ್ಕಾರದಲ್ಲಿ ಮಾಜಿ ಸಚಿವ ಸುಧಾಕರ್ ಅವರು ಚಿಕ್ಕಬಳ್ಳಾಪುರಕ್ಕೆ ಆ ಮೆಡಿಕಲ್ ಕಾಲೇಜು ತೆಗೆದುಕೊಂಡು ಹೋದರು. ಆಗ ರೂ.450 ಕೋಟಿ ಇದ್ದ ಮೆಡಿಕಲ್ ಕಾಲೇಜು ನಿರ್ಮಾಣ ವೆಚ್ಚ ರೂ.850 ಕೋಟಿಗೆ ಏರಿಕೆಯಾಗಿದೆ.

ಬಿಜೆಪಿ ದ್ವೇಷದ ರಾಜಕಾರಣ ಮಾಡಿದ್ದು, ನಾವು ಬಜೆಟ್ ನಲ್ಲಿ ಇದನ್ನು ಘೋಷಿಸಿದ್ದು, ಇದನ್ನು ಹಂತ ಹಂತವಾಗಿ ಪೂರ್ಣಗೊಳಿಸುತ್ತೇವೆ. ಕಾಲೇಜು ನಿರ್ಮಾಣಕ್ಕೆ ಅನುಮತಿ ನೀಡುವಂತೆ ಮರು ಅರ್ಜಿ ಹಾಕುತ್ತೇವೆ.

ರಾಮನಗರದಲ್ಲಿನ ಕಟ್ಟಡ ಕಾಮಗಾರಿಗೆ ರೂ.600 ಕೋಟಿ ಬಿಡುಗಡೆಯಾಗಿದ್ದು, ಕೆಲಸ ಭರದಿಂದ ಸಾಗುತ್ತಿದೆ. ರಾಜೀವ್ ಗಾಂಧಿ ವಿವಿ ಕೇಂದ್ರ ಕಚೇರಿ ರಾಮನಗರದಲ್ಲಿ ನಿರ್ಮಾಣ ಮಾಡಬೇಕು ಎಂದು 2008ರಲ್ಲೇ ಸರ್ಕಾರದ ಆದೇಶ ಹೊರಡಿಸಿ ಬಿಲ್ ಮಂಡಿಸಲಾಗಿದೆ. ಹಂತ ಹಂತವಾಗಿ ಸ್ಥಳಾಂತರ ಮಾಡಲಾಗುವುದು ಎಂದು ತಿಳಿಸಿದರು.


Share It

You May Have Missed

You cannot copy content of this page