ಉಪಯುಕ್ತ ಸುದ್ದಿ

ಭಾರತಕ್ಕೆ HMPV ಭೀತಿ : ರಾಜ್ಯದಲ್ಲೂ ಹೈ ಅಲರ್ಟ್

Share It

ಬೆಂಗಳೂರು: ಚೀನಾದಲ್ಲಿ ಸೃಷ್ಟಿಯಾಗಿರುವ ಹೊಸ ವೈರಸ್ HMPV ಇದೀಗ ಭಾರತದಲ್ಲಿ ಭೀತಿ ಸೃಷ್ಟಿಸಿದೆ. ಕೇಂದ್ರ ಸರಕಾರದ ನಿರ್ದೇಶನದ ಮೇರೆಗೆ ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ.

ಕೇಂದ್ರ ಸರಕಾರ ಎಲ್ಲ ರಾಜ್ಯಗಳಿಗೆ ಜ.4 ರಂದು ನಿರ್ದೆಶನ ನೀಡಿದ್ದು, ರಾಜ್ಯದಲ್ಲಿ ದಾಖಲಾಗುವ ಸಾಮಾನ್ಯ ನೆಗಡಿ, ಜ್ವರ ಮತ್ತು ಶೀತದ ಲಕ್ಷಣಗಳ ಮೇಲೆ ನಿಗಾ ಇಡುವಂತೆ ಸೂಚಿಸಿದೆ. ಅದರಲ್ಲೂ ಮಕ್ಕಳು ಮತ್ತು ವಯಸ್ಕರಲ್ಲಿ ಕಂಡು ಬರುವ ಇಂತಹ ಲಕ್ಷಣಗಳನ್ನು ತಕ್ಷಣವೇ ಗುರುತಿಸಲು ಸೂಚಿಸಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಸಂಬಂಧ ಸುತ್ತೋಲೆ ಹೊರಡಿಸಿದ್ದು, ಕೇಂದ್ರ ಸರಕಾರದ ಸೂಚನೆ ಅನ್ವಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಚನೆ ನೀಡಿದೆ. ಡಿಸೆಂಬರ್ 2024 ರಲ್ಲಿ ರಾಜ್ಯದಲ್ಲಿ ದಾಖಲಾಗಿರುವ ಸಾಮಾನ್ಯ ಶೀತ, ನೆಗಡಿ, SARI ಪ್ರಕರಣಗಳನ್ನು ಕಳೆದ ವರ್ಷಕ್ಕೆ ಹೋಲಿಸಿ, ವರದಿ ಪಡೆಯಲು ತೀರ್ಮಾನಿಸಿದೆ.

ದಾಖಲಾಗಿರುವ ಪ್ರಕರಣಗಳಲ್ಲಿ ಕಳೆದ ವರ್ಷಕ್ಕಿಂತ ವ್ಯತ್ಯಾಸ ಕಂಡುಬಂದರೆ, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ತೀರ್ಮಾನಿಸಿರುವ ಸರಕಾರ, ಸಾರ್ಚಜನಿಕರು ಅನುಸರಿಸಬೇಕಾದ ಕ್ರಮಗಳ ಬಗ್ಗೆಯೂ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಏನು ಮಾಡಬೇಕು?

  • ಕೆಮ್ಮುವಾಗ ಮತ್ತು ಸೀನುವಾಗ ಮೂಗು ಮತ್ತು ಬಾಯಿಯನ್ನು ಕರ್ಚಿಪ್ ಅಥವಾ ಟಿಷ್ಯು ಪೇಪರ್ ನಿಂದ ಮುಚ್ಚಿಕೊಳ್ಳಬೇಕು.
  • ಕೈಗಳನ್ನು ಆಗಾಗ ಸ್ಯಾನಿಟೈಸರ್, ಸೋಪ್ ಬಳಸಿ ಸ್ವಚ್ಛಗೊಳಿಸಿಕೊಳ್ಳಬೇಕು.
  • ಜನಸಂದಣಿಯ ಸ್ಥಳಗಳಲ್ಲಿ ಸೇರುವುದನ್ನು ಕಡಿಮೆ ಮಾಡಬೇಕು.
  • ನೆಗಡಿ, ಕೆಮ್ಮು, ಜ್ವರದ ಲಕ್ಷಣಗಳಿದ್ದರೆ ಸಾರ್ವಜನಿಕ ಸ್ಥಳಗಳಿಂದ ದೂರ ಉಳಿಯಬೇಕು.
  • ಹೊರಗಿನ ಗಾಳಿ ಹೆಚ್ಚಾಗಿ ಲಭ್ಯವಾಗುವಂತೆ ಮನೆಯ ವಾತಾವರಣ ನಿರ್ಮಾಣ ಮಾಡಿಕೊಳ್ಳಬೇಕು.
  • ಅನಾರೋಗ್ಯ ಪೀಡಿತ ವ್ಯಕ್ತಿ ಮನೆಯಲ್ಲಿಯೇ ಉಳಿಯುವ ಜತೆಗೆ, ಕಡಿಮೆ ವ್ಯಕ್ತಿಗಳ ಜತೆ ಸಂಪರ್ಕವನ್ನಿಟ್ಟುಕೊಳ್ಳಬೇಕು.
  • ಹೆಚ್ಚು ಪ್ರಮಾಣದ ನೀರು ಕುಡಿಯಬೇಕು ಹಾಗೂ ಪೌಷ್ಟಿಕಾಹಾರ ಸೇವನೆ ಮಾಡಬೇಕು.

ಏನು ಮಾಡಬಾರದು?

  • ಬಳಸಿದ ಟಿಸ್ಯು ಮತ್ತು ಕರ್ಚೀಪ್ ಮರುಬಳಕೆ ಮಾಡಬೇಡಿ
  • ಅನಾರೋಗ್ಯ ಪೀಡಿತ ವ್ಯಕ್ತಿಗಳ ಜತೆಗೆ ಸಂಪರ್ಕ, ಟವೆಲ್ ಮತ್ತಿತರ ವಸ್ತುಗಳನ್ನು ಹಂಚಿಕೊಳ್ಳಬಾರದು.
  • ಪದೇಪದೇ ಕಣ್ಣು, ಮೂಗು ಬಾಯಿ ಮುಟ್ಟಿಕೊಳ್ಳಬಾರದು
  • ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಮಾಡಬಾರದು.
  • ತಜ್ಞ ವೈದ್ಯರ ಸಲಹೆ ಇಲ್ಲದೆ ಸ್ವತಃ ಚಿಕಿತ್ಸೆ ಮಾಡಿಕೊಳ್ಳಬಾರದು.

Share It

You cannot copy content of this page