ಉಪಯುಕ್ತ ರಾಜಕೀಯ ಸುದ್ದಿ

ದಕ್ಷಿಣ ಕನ್ನಡದ ಅಭಿವೃದ್ಧಿಗೆ ₹457 ಕೋಟಿ ಬಿಡುಗಡೆ: ಸ್ಥಳೀಯ ಉದ್ಯೋಗ ಸೃಷ್ಟಿಗೆ ಸರ್ಕಾರದ ಒತ್ತು

Share It

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಿ, ಯುವಜನರು ಬೇರೆ ರಾಜ್ಯ ಅಥವಾ ದೇಶಗಳಿಗೆ ವಲಸೆ ಹೋಗುವ ಪರಿಸ್ಥಿತಿಯನ್ನು ತಡೆಯುವ ಉದ್ದೇಶದಿಂದ ಸರ್ಕಾರ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಅಭಿವೃದ್ಧಿಗಾಗಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ₹165 ಕೋಟಿ, ಜಿಲ್ಲೆಯ ಶಾಸಕರ ಕ್ಷೇತ್ರಾಭಿವೃದ್ಧಿಗೆ ₹190 ಕೋಟಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಮೂಲಕ ₹102 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಈ ಮೂಲಕ ಜಿಲ್ಲೆಗೆ ಒಟ್ಟು ₹457 ಕೋಟಿ ಅನುದಾನ ಲಭಿಸಿದೆ ಎಂದು ಅವರು ವಿವರಿಸಿದರು.

ಮಂಗಳೂರು ಮೀನುಗಾರಿಕಾ ಬಂದರನ್ನು ಆಧುನೀಕರಣಗೊಳಿಸುವ ಯೋಜನೆಯನ್ನು ಸುಮಾರು ₹37 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಯಡಿಯಲ್ಲಿ 320 ಮೀಟರ್ ಉದ್ದದ ನೂತನ ಜೆಟ್ಟಿ ನಿರ್ಮಾಣ, ಸುಧಾರಿತ ಮೂಲಸೌಕರ್ಯಗಳ ಒದಗಿಕೆ, ಹರಾಜು ಮಳಿಗೆಗಳ ಪುನರ್ ನಿರ್ಮಾಣ ಹಾಗೂ ಒಳಚರಂಡಿ ವ್ಯವಸ್ಥೆಗಳ ಅಭಿವೃದ್ಧಿ ನಡೆಯುತ್ತಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಶೀಘ್ರದಲ್ಲೇ ಸಾರ್ವಜನಿಕ ಬಳಕೆಗೆ ಮೀಸಲಿಡಲಾಗುವುದು. ಇದರಿಂದ ಮೀನುಗಾರ ಸಮುದಾಯದ ದಶಕಗಳ ಬೇಡಿಕೆಗಳು ಈಡೇರಲಿವೆ ಎಂದು ಸಚಿವರು ಹೇಳಿದರು.

ಯುವಜನರನ್ನು ದಾರಿ ತಪ್ಪಿಸಿ ಹಿಂಸಾತ್ಮಕ ಚಟುವಟಿಕೆಗಳತ್ತ ತಳ್ಳುವ ಯಾವುದೇ ವ್ಯಕ್ತಿ ಅಥವಾ ಸಂಘಟನೆಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಅವರು ಎಚ್ಚರಿಕೆ ನೀಡಿದರು. ವೈಯಕ್ತಿಕ ಲಾಭಕ್ಕಾಗಿ ಸಮಾಜದ ಶಾಂತಿಯನ್ನು ಭಂಗಪಡಿಸುವ ಪ್ರಯತ್ನಗಳನ್ನು ಸರ್ಕಾರ ಸಹಿಸುವುದಿಲ್ಲ ಎಂದರು.

ಪ್ರತಿಯೊಬ್ಬರೂ ತಮ್ಮ ಧರ್ಮದ ಮೂಲಭೂತ ಮೌಲ್ಯಗಳನ್ನು ಪಾಲಿಸುತ್ತಾ, ಇತರ ಧರ್ಮಗಳಿಗೂ ಗೌರವ ತೋರಿದಾಗ ಮಾತ್ರ ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯ ನೆಲೆಸಲು ಸಾಧ್ಯ. ಶಾಂತಿಯ ವಾತಾವರಣವಿದ್ದಲ್ಲಿ ಮಾತ್ರ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ ಮತ್ತು ಜನರ ಜೀವನಮಟ್ಟ ಸುಧಾರಣೆಯಾಗುತ್ತದೆ ಎಂದು ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.

ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸರ್ಕಾರ ಹಲವು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದೆ. ಉತ್ತಮ ಕಾನೂನು ವ್ಯವಸ್ಥೆಯು ಅಭಿವೃದ್ಧಿಗೆ ಬುನಾದಿಯಾಗಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಸಮಾಜವನ್ನು ವಿಭಜಿಸುವ ಶಕ್ತಿಗಳು ಅಭಿವೃದ್ಧಿಗೆ ಅಡ್ಡಿಯಾಗುತ್ತಿವೆ ಎಂಬುದನ್ನು ಜನರು ಅರಿಯಬೇಕು ಎಂದು ಅವರು ಹೇಳಿದರು.

ಸರ್ಕಾರದ ಪ್ರಯತ್ನಗಳಿಂದ ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸಿಕೊಂಡಿದ್ದು, ಇದರ ಪರಿಣಾಮವಾಗಿ ಉದ್ಯೋಗ ಸೃಷ್ಟಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತಿದೆ. ಇದರಿಂದ ಸ್ಥಳೀಯ ಯುವಕರಿಗೆ ಇಲ್ಲಿಯೇ ಉದ್ಯೋಗಾವಕಾಶ ದೊರಕಿಸಿ, ವಲಸೆಯನ್ನು ತಡೆಯಲು ಸಾಧ್ಯವಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ವಿವಿಧ ನಿಗಮ ಮತ್ತು ಮಂಡಳಿಗಳ ಅಧ್ಯಕ್ಷರು, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಐಜಿಪಿ ಅಮಿತ್ ಸಿಂಗ್, ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಎಸ್ಪಿ ಡಾ. ಅರುಣ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪರೇಡ್ ಕಾರ್ಯಕ್ರಮವನ್ನು ದಿಲ್ಲಿ ಮೂಲದ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಅನನ್ಯ ಶ್ರೀವಾಸ್ತವ ಅವರು ಕನ್ನಡದಲ್ಲಿ ಯಶಸ್ವಿಯಾಗಿ ನಿರ್ವಹಿಸಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿನ ಅಗ್ರ 10 ವಿದ್ಯಾರ್ಥಿಗಳಿಗೆ ತಲಾ ₹50,000 ನಗದು ಬಹುಮಾನ ನೀಡಿ ಗೌರವಿಸಲಾಯಿತು. 15 ವರ್ಷಗಳ ಕಾಲ ಅಪಘಾತ ರಹಿತ ಸೇವೆ ಸಲ್ಲಿಸಿದ ಕೆಎಸ್‌ಆರ್‌ಟಿಸಿ ಚಾಲಕರಿಗೆ ಬೆಳ್ಳಿ ಪದಕ ನೀಡಿ ಸನ್ಮಾನಿಸಲಾಯಿತು. ಅಂಗಾಂಗ ದಾನ ಮಾಡಿದ ಸಿಂಧುಶ್ರೀ ಅವರ ಕುಟುಂಬವನ್ನು ಕೂಡ ಗೌರವಿಸಲಾಯಿತು.

ಸಭೆಯ ನಂತರ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಕವಾಯಿತಿನಲ್ಲಿ ಭಾರತ ಸೇವಾದಳ ಮುಲ್ಲಕಾಡು ಶಾಲಾ ತಂಡ ಪ್ರಥಮ ಸ್ಥಾನ ಹಾಗೂ ಕಿನ್ನಿಕಂಬಳ ಸರ್ಕಾರಿ ಪ್ರೌಢಶಾಲೆಯ ಸ್ಕೌಟ್ಸ್ ಹುಡುಗರ ತಂಡ ದ್ವಿತೀಯ ಸ್ಥಾನ ಪಡೆದು ರೋಲಿಂಗ್ ಶೀಲ್ಡ್ ಗಳಿಸಿದರು.

ಉದ್ಯೋಗ ಖಾತರಿ ಯೋಜನೆ ರದ್ದತಿ ವಿರುದ್ಧ ಆಕ್ಷೇಪ

ಹಿಂದಿನ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿರುವುದಕ್ಕೆ ದಿನೇಶ್ ಗುಂಡೂರಾವ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕಳೆದ ಎರಡು ದಶಕಗಳಲ್ಲಿ ಪರಿಣಾಮಕಾರಿಯಾಗಿ ಜಾರಿಯಾದ ಈ ಯೋಜನೆಯನ್ನು ರದ್ದುಗೊಳಿಸುವುದು ಬಡವರ ಹಾಗೂ ಕಾರ್ಮಿಕರ ಹಿತಕ್ಕೆ ವಿರುದ್ಧವಾಗಿದೆ ಎಂದು ಅವರು ಹೇಳಿದರು.

ರಾಜ್ಯಗಳ ಅಧಿಕಾರಗಳನ್ನು ಕಡಿತಗೊಳಿಸಿ ಕೇಂದ್ರದ ಹಿಡಿತ ಹೆಚ್ಚಿಸುವ ಹೊಸ ವ್ಯವಸ್ಥೆ ಸಂವಿಧಾನಾತ್ಮಕವಾಗಿ ಹಾಗೂ ನೈತಿಕವಾಗಿ ಸರಿಯಲ್ಲ. ವಿಕೇಂದ್ರಿಕರಣದ ತತ್ವಕ್ಕೆ ವಿರುದ್ಧವಾಗಿರುವ ಈ ಕ್ರಮವನ್ನು ರಾಜ್ಯ ಸರ್ಕಾರ ಕಾನೂನುಬದ್ಧವಾಗಿಯೂ ನೈತಿಕವಾಗಿಯೂ ವಿರೋಧಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.


Share It

You cannot copy content of this page