ಉಪಯುಕ್ತ ಸುದ್ದಿ

ಡಿ.31 ರ ಸಾರಿಗೆ ನೌಕರರ ಮುಷ್ಕರ: ಆಯುಕ್ತರ ನೇತೃತ್ವದ ಸಭೆ ನಾಳೆ

Share It

ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಕರೆದಿದ್ದ ಸಭೆಯನ್ನು ನಾಳೆಗೆ ಮುಂದೂಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಡಿ.31 ರಂದು ರಾಜ್ಯ ಸಾರಿಗೆ ಇಲಾಖೆಯ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲು ತೀರ್ಮಾನಿಸಿದ್ದಾರೆ. ಈ ಹಿನ್ನೆಲೆ ಕಾರ್ಮಿಕ ಇಲಾಖೆ ಆಯುಕ್ತರ ನೇತೃತ್ವದಲ್ಲಿ ಸಭೆ ನಡೆಸಿ, ಕಾರ್ಮಿಕ ಸಂಘಟನೆಗಳ ಮುಖಂಡರ ಜತೆ ಚರ್ಚಿಸಲು ತೀರ್ಮಾನಿಸಲಾಗಿದ್ದು, ಸೋಮವಾರಕ್ಕೆ ಮುಂದೂಡಲಾಗಿದೆ.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ ಸದಸ್ಯರನ್ನೊಳಗೊಂಡ ಜಂಟಿ ಕ್ರಿಯಾ ಸಮಿತಿ ಅನಿರ್ದಿಷ್ಟಾವಧಿ ಮುಷ್ಕರಕೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘದ ಮುಖಂಡ ಹೆಚ್.ವಿ. ಅನಂತ ಸುಬ್ಬರಾವ್ ನೇತೃತ್ವದಲ್ಲಿ ಕಾರ್ಮಿಕ ಇಲಾಖೆ ಸಭೆ ನಡೆಸಲು ತೀರ್ಮಾನಿಸಿದೆ.

“ಸರ್ಕಾರ ನಮ್ಮನ್ನು ಕರೆದು ಚರ್ಚಿಸಲಿ ಎನ್ನುವ ಕಾರಣಕ್ಕೆ ನೋಟಿಸ್ ನೀಡಿದ್ದೇವೆ. ಆದರೆ ಸರ್ಕಾರ ಈವರೆಗೆ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ. ಬದಲಿಗೆ ಮುಷ್ಕರ ಮಾಡಿದರೆ ಎಸ್ಮಾ ಜಾರಿ ಮಾಡುತ್ತೇವೆ” ಎಂದು ಹೇಳಿದ್ದಾರೆ. “ಸಿದ್ದರಾಮಯ್ಯ ಅವರು ಇಂತಹ ಸಾಹಸಕ್ಕೆ ಕೈ ಹಾಕುವುದಿಲ್ಲ ಎಂದು ತಿಳಿದುಕೊಳ್ಳುತ್ತೇನೆ. ನಮ್ಮ ಬೇಡಿಕೆಗಳು ಈಡೇರಿಲ್ಲ. ಹಾಗಾಗಿ ಮುಷ್ಕರ ಶತಸಿದ್ಧ ಎಂದು ಸುಬ್ಬಾರಾವ್ ತಿಳಿಸಿದ್ದಾರೆ.

ನಗದು ರಹಿತ ಆರೋಗ್ಯ ಚಿಕಿತ್ಸೆ ಯೋಜನೆಯನ್ನು ಏಕಕಾಲದಲ್ಲಿ 4 ನಿಗಮಗಳಲ್ಲಿ ಜಾರಿಗೆ ತರಬೇಕು. ಸಂಸ್ಥೆಯಲ್ಲಿ ವಿದ್ಯುತ್ ಚಾಲಿತ ಬಸ್ಸುಗಳ ನಿರ್ವಹಣೆ ಖಾಸಗಿ ಗುತ್ತಿಗೆದಾರರಿಗೆ ನೀಡುವ ಪದ್ಧತಿ ಕೈಬಿಟ್ಟು, ಸಂಸ್ಥೆಯ ನೌಕರರು ಮತ್ತು ಸಿಬ್ಬಂದಿ ನಿರ್ವಹಣೆ ಮಾಡಬೇಕು. ಹೊರ ಗುತ್ತಿಗೆ ಆಧಾರದ ಮೇಲೆ ಚಾಲಕ, ತಾಂತ್ರಿಕ ಮತ್ತು ಭದ್ರತಾ ಸಿಬ್ಬಂದಿ ನೇಮಕಾತಿ ಕೈಬಿಡಬೇಕು ಎಂಬುದು ಸಾರಿಗೆ ನೌಕರರ ಆಗ್ರಹವಾಗಿದೆ.

1-1-2020 ರಿಂದ ಆಗಿರುವ ಶೇ.15 ರಷ್ಟು ವೇತನ ಹೆಚ್ಚಳದ ನಂತರದ 38 ತಿಂಗಳ ಬಾಕಿ ಹಣ ವಿಳಂಬವಿಲ್ಲದೆ ಪಾವತಿಸುವುದು, ಸದ್ಯ ನೌಕರರು ಪಡೆಯುತ್ತಿರುವ ವಿವಿಧ ಭತ್ಯೆಗಳನ್ನು ಐದು ಪಟ್ಟು ಹೆಚ್ಚಳ ಮಾಡುವುದು, ಎಲ್ಲಾ ನೌಕರರಿಗೂ ಪ್ರತೀ ತಿಂಗಳೂ ಹೊರ ರೋಗಿ ಚಿಕಿತ್ಸೆ ವೆಚ್ಚಕ್ಕಾಗಿ ಎರಡು ಸಾವಿರ ರೂಪಾಯಿ ಜೊತೆಗೆ ಉಚಿತ ಔಷಧಿ ನೀಡುವುದು, ಇಎಸ್‌ಐ ಮಾದರಿ ನೌಕರರ ಮೂಲ ವೇತನದ ಶೇ.4.5 ಹಾಗೂ ನೌಕರರಿಂದ ಶೇ.೦.5 ವಂತಿಗೆ ಸಂಗ್ರಹಿಸಿ ಟ್ರಸ್ಟ್ ರಚಿಸಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಕೊಡುವ ಯೋಜನೆ ರೂಪಿಸಬೇಕು. ನಿವೃತ್ತ ನೌಕರರು ಮತ್ತು ಅವರ ಪತಿ/ಪತ್ನಿ ಹಾಗೂ ಮಕ್ಕಳಿಗೂ ಆರೋಗ್ಯ ಯೋಜನೆ ನೀಡಬೇಕು ಎಂಬುದು ಸಾರಿಗೆ ನೌಕರರ ಬೇಡಿಕೆಯಾಗಿದೆ.


Share It

You cannot copy content of this page