ಬೆಂಗಳೂರು: ಕಾಂಗ್ರೆಸ್ ಸರಕಾರ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರವನ್ನು ಶೇ.೧೫ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಇದು ಇದೀಗ ವಿಪಕ್ಷಗಳ ವಿರೋಧಕ್ಕೆ ಕಾರಣವಾಗಿದೆ.
ಆದರೆ, 2004 ರಿಂದ 2024 ರವರೆಗೆ ಅಂದರೆ ಕಳೆದ 20 ವರ್ಷದಲ್ಲಿ ಬಸ್ ಟಿಕೆಟ್ ದರ ಎಷ್ಟು ಹೆಚ್ಚಳವಾಗಿದೆ ಎಂಬುದನ್ನು ನಾವು ಗಮನಿಸಬಹುದು. 2006 ರಲ್ಲಿ ಶೇ. 8.02 ರಷ್ಟು ಟಿಕೆಟ್ ದರ ಹೆಚ್ಚಳ ಮಾಡಲಾಗಿತ್ತು. ಆಗ ಬಿಜೆಪಿ ಮತ್ತು ಜೆಡಿಎಸ್ ನೇತೃತ್ವದ ಮೈತ್ರಿ ಸರಕಾರ ಅಧಿಕಾರದಲ್ಲಿತ್ತು.
2008 ರಿಂದ 2012 ರವರೆಗೆ ಪ್ರಸ್ತುತ ಬಿಜೆಪಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಸಾರಿಗೆ ಸಚಿವರಾಗಿದ್ದ ಅವಧಿಯಲ್ಲಿ ಶೇ.48 ರಷ್ಟು ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ. ಈ ಅವಧಿಯಲ್ಲಿ ಒಟ್ಟು 7 ಬಾರಿ ಟಿಕೆಟ್ ದರ ಹೆಚ್ಚಿಸಿದ್ದು, ಅತಿ ಹೆಚ್ಚು ಬಾರಿ ಟಿಕೆಟ್ ದರ ಹೆಚ್ಚಿಸಿದ ಅವಧಿ ಎಂದರೆ ತಪ್ಪಲ್ಲ.
ಅನಂತರ 2013 ರಿಂದ 2014 ರವರೆಗಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ 2013, 2014 ಮತ್ತು 2015 ರಲ್ಲಿ ಮೂರು ಬಾರಿ ಟಿಕೆಟ್ ದರ ಹೆಚ್ಚಳ ಮಾಡಲಾಗಿತ್ತು. ಆಗ ಒಟ್ಟಾರೆ, ಮೂರು ವರ್ಷದಲ್ಲಿ ಶೇ.18ರಷ್ಟು ಟಿಕೆಟ್ ದರ ಹೆಚ್ಚಳ ಮನಾಡಲಾಗಿತ್ತಾದರೂ, ಅದರಲ್ಲಿ ಶೇ. 2 ರಷ್ಟು ಕಡಿಮೆ ಮಾಡಲಾಗಿತ್ತು.
ಬಿ.ಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ 2020 ರಲ್ಲಿ ಶೇ. 12 ರಷ್ಟು ಬಸ್ ಟಿಕೆಟ್ ದರ ಹೆಚ್ಚಿಸಲಾಗಿದೆ. ಇದೀಗ ಕಾಂಗ್ರೆಸ್ ಸರಕಾರ ಶೇ. 15 ರಷ್ಟು ಟಿಕೆಟ್ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಈ ಎಲ್ಲ ಅಂಕಿ-ಅAಶಗಳ ಪ್ರಕಾರ ಕಾಂಗ್ರೆಸ್ ಅಧಿಕಾರದಲ್ಲಿದ್ದ ಅವಧಿಗಿಂತ ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಹೆಚ್ಚು ಸಲ ಟಿಕೆಟ್ ದರ ಹೆಚ್ಚಳವಾಗಿದೆ ಎಂಬುದು ಕಾಂಗ್ರೆಸ್ ನಾಯಕರ ವಾದವಾಗಿದೆ.