ಬೆಂಗಳೂರು: ರಾಜ್ಯದಲ್ಲಿ ಚಳಿಯ ವಾತಾವರಣ ಹೆಚ್ಚಾಗಲಿದ್ದು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಶೀತಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈಗಾಗಲೇ, ಬೆಳಗಿನ ಸಮಯದಲ್ಲಿ ವಿಪರೀತ ಚಳಿಯಿದ್ದು, ಜನರು ಮನೆಯಿಂದ ಹೊರಗೆ ಬರಲು ಹೆದರುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಅನುಭವ ಮತ್ತಷ್ಟು ದಿನ ಮುಂದುವರಿಯಲಿದ್ದು, ಉತ್ತರ ಕರ್ನಾಟಕದ ಬೀದರ್, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಎರಡು ದಿನ ಶೀತ ಮತ್ತು ಮಂಜು ಆವರಿಸುವ ಸಾಧ್ಯತೆಯಿದೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಚಳಿಯ ವಾತಾವರಣ ಮುಂದುವರಿಯಲಿದ್ದು, ಕೆಲ ಜಿಲ್ಲೆಗಳಲ್ಲಿ ಚಳಿಗಾಳಿ ಬೀಸಲಿದೆ. ದಕ್ಷಿಣ ಒಳನಾಡಿನಲ್ಲಿ ಮಂಜು ಮುಸುಕಿದ ವಾತಾವರಣ ಮುಂದುವರಿಯಲಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಇರಲಿದೆ.
ವಿಜಯಪುರದಲ್ಲಿ ಗರಿಷ್ಠ ತಾಪಮಾನ 30 ಮತ್ತು ಕನಿಷ್ಠ 16, ಬೀದರ್ ನಲ್ಲಿ ಗರಿಷ್ಠ 29 ಮತ್ತು ಗರಿಷ್ಠ 13, ಕಲಬುರಗಿಯಲ್ಲಿ ಗರಿಷ್ಠ 31 ಮತ್ತು ಕನಿಷ್ಠ 14 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.