ಅಕ್ರಮ ಲೇಔಟ್ ನಲ್ಲಿ ಆಸ್ತಿ ಖರೀದಿಸಿದ್ದವರಿಗೆ ಗುಡ್ ನ್ಯೂಸ್ : ನಿಮ್ಮ ದಾಖಲೆ ಸರಿಪಡಿಸಿಕೊಳ್ಳಲು ಸುವರ್ಣಾವಕಾಶ
ಬೆಂಗಳೂರು: ನಗರ ಪ್ರದೇಶದಲ್ಲಿ ಸೈಟ್ ಹೊಂದಿದ್ದು, ಸರಿಯಾದ ದಾಖಲೆಗಳಿಲ್ಲದೆ ಪರದಾಡುತ್ತಿರುವ ನಿವೇಶನದಾರರಿಗೆ ಸರಕಾರ ಗುಡ್ ನ್ಯೂಸ್ ನೀಡಿದೆ. ಇಂತಹ 30 ಲಕ್ಷ ಅಸ್ತಿಗಳಿಗೆ ಬಿ ಖಾತಾ ನೀಡಲು ಕಂದಾಯ ಇಲಾಖೆ ತೀರ್ಮಾನಿಸಿದೆ.
ಬೆಂಗಳೂರು ಹೊರತುಪಡಿಸಿ ಉಳಿದ ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ 55 ಲಕ್ಷ ನಿವೇಶನಗಳಿವೆ ಎಂದು ಹೇಳಲಾಗಿದೆ. ಇವುಗಳಲ್ಲಿ ಇ-ಖಾತಾ ಪಡೆದಿರುವುದು ಕೇವಲ 21 ಲಕ್ಷ ನಿವೇಶನಗಳಿಗೆ ಮಾತ್ರ. ಇನ್ನು 30 ಲಕ್ಷ ಆಸ್ತಿಗಳಿಗೆ ಇ – ಖಾತಾ ಇಲ್ಲ. ಹೀಗಾಗಿ, ಈ ಎಲ್ಲ ಆಸ್ತಿಗಳಿಗೆ ದಾಖಲೆ ಒದಗಿಸಿ ಬಿ ಖಾತಾ ಮಾಡಿಕೊಡುವ ಪ್ರಕ್ರಿಯೆಗೆ ಸರಕಾರ ಚಾಲನೆ ನೀಡಿದೆ.
ಸಿಎಂ ಸಿದ್ದರಾಮಯ್ಯ ಅವರ ಸೂಚನೆಯಂತೆ ಫೆಬ್ರವರಿ 10 ರಿಂದ ಇ-ಆಸ್ತಿ ನೋಂದಣಿ ಮಾಡಿ, ಬಿ ಖಾತಾ ನೀಡುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮೂರು ತಿಂಗಳಲ್ಲಿ ಈ ಪ್ರಕ್ರಿಯೆ ಮುಗಿಸಬೇಕು. ಇದನ್ನು ಅಭಿಯಾನದ ಮಾದರಿಯಲ್ಲಿ ಮಾಡಬೇಕು ಎಂದು ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಬಿ ಖಾತಾ ಇರಬಾರದು, ‘ಎ’ ಖಾತಾ ಮಾತ್ರ ಇರಬೇಕು. ಅನಧಿಕೃತ ಲೇಔಟ್ ಆಗುತ್ತಿರುವ ಕುರಿತು ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ. ಈ ಹಿನ್ನೆಲೆಯಲ್ಲಿ ಎಲ್ಲವನ್ನೂ ಪರಿವರ್ತಿಸುವ ಕಾರ್ಯ ನಡೆದಿದೆ. ನಗರಾಭಿವೃದ್ಧಿ ಇಲಾಖೆಯ ನಂತರ ಗ್ರಾಪಂ ವ್ಯಾಪ್ತಿಯ ಅನಧಿಕೃತ ನಿವೇಶನಗಳಿಗೆ ಬಿ ಖಾತಾ ನೀಡಲು ಸೂಚನೆ ನೀಡಲಾಗಿದೆ. ನಗರ ವ್ಯಾಪ್ತಿಯಲ್ಲಿ ಮುಗಿದ ನಂತರ ಗ್ರಾಮೀಣ ಭಾಗದಲ್ಲಿ ಕಾರ್ಯಾಚರಣೆ ನಡೆಸುವಂತೆಯೂ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಭಿಯಾನದ ಮಾದರಿಯಲ್ಲಿ ಕಾರ್ಯಾಚರಣೆ ನಡೆಯಲಿದ್ದು, ಅನಧಿಕೃತ ಬಡಾವಣೆಗಳ ನಿವೇಶನದಾರರಿಗೆ ಇದು ಅನುಕೂಲವಾಗುತ್ತದೆ. ಸೇಲ್ ಡೀಡ್ ಮಾಡಿಕೊಂಡು ಖರೀದಿ ಮಾಡಿಕೊಂಡವರಿಗೆ ಮಾತ್ರ ಇದು ಅನ್ವಯವಾಗುತ್ತದೆ. ಆದರೆ, ಇದರ ದುರುಪಯೋಗ ಆಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದ್ದಾರೆ.


