ಬೆಂಗಳೂರು: ತುಂಗಭದ್ರಾ ಜಲಾಶಯದ ಗೇಟ್ ಮುರಿದು ಅವಾಂತರ ಸೃಷ್ಟಿಯಾದ ಬೆನ್ನಲ್ಲೇ ರಾಜ್ಯದ ಎಲ್ಲ ಜಲಾಶಯಗಳ ಪರಿಶೀಲನೆ ನಡೆಸಲು ನಿವೃತ್ತ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ನೇತ್ರತ್ವದಲ್ಲಿ ಸಮಿತಿಯೊಂದನ್ನು ರಚನೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು, ರಾಜ್ಯದ ಎಲ್ಲಾ ಜಲಾಶಯಗಳ ಗೇಟ್‌ಗಳನ್ನು ಪರಿಶೀಲಿಸಿ ವರದಿ ನೀಡಲು ಸೂಚಿಸಿದ್ದಾರೆ. ಜಲಾಶಯಗಳ ಗೇಟ್ ಸುರಕ್ಷತೆ, ದುರಸ್ತಿ ಕಾಮಗಾರಿ ಹಾಗೂ ಬದಲಾವಣೆ ಅಗತ್ಯತೆ ಬಗ್ಗೆ ಅಧ್ಯಯನ ನಡೆಸಿ, ಮುಂಜಾಗ್ರತಾ ಕೆಲಸವನ್ನು ಕೈಗೊಳ್ಳುವಂತೆ ಸಮಿತಿಗೆ ಸೂಚಿಸಲಾಗಿದೆ.
ಜಲಾಶಯಗಳ ಗೇಟ್‌ಗಳನ್ನು ಸೂಕ್ತ ತಾಂತ್ರಿಕ ನಿಪುಣರ ಸಮಿತಿ ರಚಿಸಿ ಪರಿಶೀಲಿಸುವುದು, ದುರಸ್ತಿ ಮತ್ತು ಬದಲಾವಣೆ ಮಾಡುವ ಕೆಲಸವನ್ನು ಈ ಸಮಿತಿ ಕೈಗೊಳ್ಳಬೇಕಿದೆ. ಬಿಬಿಎಂಪಿ ಆಡಳಿತಾಧಿಕಾರಿಯಾಗಿದ್ದ ರಾಕೇಶ್ ಸಿಂಗ್ ಇತ್ತೀಚೆಗಷ್ಟೇ ನಿವೃತ್ತರಾಗಿದ್ದರು. ಇದೀಗ ಅವರನ್ನು ಡ್ಯಾಂಗಳ ಪರಿಶೀಲನೆ ಸಮಿತಿಗೆ ನೇಮಿಸಲಾಗಿದೆ.