ಉಪಯುಕ್ತ ಸುದ್ದಿ

ಆ.25 ರಂದು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಕಾರ್ಯಕಾರಿ ಸಮಿತಿ ಚುನಾವಣೆ

Share It

ಕಲಬುರಗಿ: ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ರಾಜ್ಯ ಕಾರ್ಯನಿರ್ವಾಹಕ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲು ಪ್ರಸಕ್ತ ಆಗಸ್ಟ್ 25ರಂದು ಚುನಾವಣೆ ನಡೆಯಲಿದೆ ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ಶರಣಕುಮಾರ್ ಮೋದಿ ತಿಳಿಸಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಈ ಕುರಿತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅಂದು ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಕಲಬುರಗಿಯ ಸಾರ್ವಜನಿಕ ಉದ್ಯಾನದಲ್ಲಿರುವ ವೀರಶೈವ ಕಲ್ಯಾಣ ಮಂಟಪದಲ್ಲಿ ಮತದಾನ ನಡೆಯಲಿದೆ. ಮತದಾನದ ಬಳಿಕ ಅದೇ ದಿನ ಮತ ಎಣಿಕೆ ಕೈಗೊಳ್ಳಲಾಗುವುದು.

ಈ ಚುನಾವಣಾ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗಲು ಶರಣಬಸಪ್ಪ ಕಾಡಾದಿ ಅಂದು ಚುನಾವಣಾಧಿಕಾರಿಯಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಘಟಕದ 27 ಸ್ಥಾನಗಳಿಗೆ (ಪುರುಷರು) ಒಟ್ಟು 57 ಸದಸ್ಯರು ಕಣದಲ್ಲಿದ್ದಾರೆ. ಕಲಬುರಗಿ ಜಿಲ್ಲೆಯ ರಾಜಶೇಖರ ಸೀರಿ, ಶಶಿಕಾಂತ ಪಾಟೀಲ್ ಹಾಗೂ ಸಂತೋಷ ಪಾಟೀಲ್ ಸರಡಗಿ ಕಣದಲ್ಲಿದ್ದಾರೆ.

ಈಗಾಗಲೇ ರಾಜ್ಯ ಘಟಕದ ಅಧ್ಯಕ್ಷರಾಗಿ ಶಂಕರ ಬಿದರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಾಷ್ಟ್ರೀಯ ಘಟಕದ ಕಾರ್ಯಕಾರಿ ಸಮಿತಿಗೆ ಸಚಿವರಾದ ಶರಣಬಸಪ್ಪ ದರ್ಶನಾಪುರ ಹಾಗೂ ಚಂದು ಪಾಟೀಲ್ ಸಹ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ವಿವರಿಸಿದರು.

ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಪೂಜ್ಯ ಹಾನಗಲ್ ಕುಮಾರಸ್ವಾಮಿಯವರು 1904ರಲ್ಲಿ ಮಹಾಸಭಾ ಸ್ಥಾಪಿಸಿದ್ದು, ಅಂದಿನಿಂದ ಹಿರಿಯರಾದ ಭೀಮಣ್ಣ, ಶಾಮನೂರು ಶಿವಶಂಕರಪ್ಪ, ಈಶ್ವರ ಖಂಡ್ರೆ ಸೇರಿದಂತೆ ಸಮುದಾಯದ ಅನೇಕರು ಸಮಾಜದ ಎಲ್ಲ ಒಳ ಪಂಗಡದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲಾ ಮಠಾಧೀಶರ ಮತ್ತು ಆಶೀರ್ವಾದ, ಗಣ್ಯರ ಸಹಕಾರದಿಂದ ಮಹಾಸಭಾ ಮುನ್ನಡೆಸಲಾಗುತ್ತಿದೆ.

ಅದರಲ್ಲೂ ಮುಖ್ಯವಾಗಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಬಾಲಕ/ಬಾಲಕಿಯರ ವಸತಿ ನಿಲಯಗಳನ್ನು ನಿರ್ಮಿಸಲಾಗಿದೆ. ಇದರ ಜೊತೆಗೆ ಕಲಬುರಗಿ ಜಿಲ್ಲಾ ಘಟಕವು ಕಲಬುರಗಿಯಲ್ಲಿ ಎಲ್ಲರ ಸಹಕಾರದಿಂದ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಬಾಲಕಿಯರ ವಸತಿ ನಿಲಯ ನಿರ್ಮಿಸಲಾಗಿದೆ ಎಂದರು.

ರಾಜ್ಯಾದ್ಯಂತ ಈ ಚುನಾವಣೆಯಲ್ಲಿ ಸುಮಾರು 31 ಸಾವಿರ ಮತದಾರರು ಮತ ಚಲಾಯಿಸಲಿದ್ದಾರೆ. ಈ ಪೈಕಿ ಕಲಬುರಗಿ ಜಿಲ್ಲೆಯಲ್ಲಿ 1933 ಮತದಾರರಿದ್ದು, ಸಮಾಜದ ಎಲ್ಲ ಅರ್ಹ ಮತದಾರರು ಆ.25ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾನ ಮಾಡಬೇಕೆಂದು ಅವರು ಮನವಿ ಮಾಡಿದರು.

ಈ ವೇಳೆ ಮಹಾಸಭಾ ಸದಸ್ಯರಾದ ಸೋಮಶೇಖರ ಹಿರೇಮಠ, ರಾಜಶೇಖರ ಸೀರಿ, ಶಶಿಕಾಂತ ಪಾಟೀಲ್, ಡಾ.ಸುಧಾ ಹಾಲಕಾಯಿ ಹಾಗೂ ರವೀಂದ್ರ ಕೋಳಕೂರ ಇದ್ದರು.


Share It

You cannot copy content of this page