ರಾಜಕೀಯ ಸುದ್ದಿ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಸಹೋದರಿ ಇದ್ದಾರಾ ?

Share It

ಹುಬ್ಬಳ್ಳಿ : ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಸಹೋದರ ಹಾಗೂ ಸಹೋದರಿ ಮೇಲೆ ಜೆಡಿಎಸ್ ಮಾಜಿ ಶಾಸಕ ದೇವಾನಂದ ಸಿಂಗ್ ಚವಾಣ ಮಾಡಿರುವ ಆರೋಪಕ್ಕೆ ಕೊನೆಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಪಷ್ಟನೆ ನೀಡಿದ್ದಾರೆ.

ಪತ್ರಕರ್ತರ ಜೊತೆ ಮಾತನಾಡಿದ ಅವರು, ನಮ್ಮ ತಂದೆ-ತಾಯಿಗೆ ನಾವು ಒಟ್ಟು ನಾಲ್ವರು ಸಹೋದರರು. ಅವರಲ್ಲಿ ಒಬ್ಬ ಸಹೋದರ ಈ ಹಿಂದೆಯೇ ತೀರಿಹೋಗಿದ್ದಾರೆ. ಈಗ ನಾವು ಕೇವಲ ಮೂವರು ಸಹೋದರರು ಮಾತ್ರ ಇದ್ದೇವೆ. ನಮಗೆ ಯಾವ ಸಹೋದರಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನಾನು ಮತ್ತು ಸಹೋದರ ಗೋಪಾಲ ಜೋಶಿ 32 ವರ್ಷಗಳ ಹಿಂದೆಯೇ ಬೇರೆ ಬೇರೆಯಾಗಿದ್ದೇವೆ. ಈ ಹಿಂದೆ ನಾನು ಬಿಜೆಪಿ ರಾಜ್ಯಾಧ್ಯಕ್ಷನಾಗಿದ್ದ ವೇಳೆ ಸಹ ಸೋದರನ ಮೇಲೆ ಆರೋಪ ಬಂದಿತ್ತು. ಆಗ ನಾನು ಬೆಂಗಳೂರು ನ್ಯಾಯಾಲಯದ ಮೊರೆ ಹೋಗಿ ನನಗೆ ಮತ್ತು ಸಹೋದರನ ವ್ಯವಹಾರಕ್ಕೆ ಸಂಬಂಧಿಸಿ ಯಾವುದೇ ಲಿಂಕ್ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದುಕೊಂಡು ಬಂದಿದ್ದೆ. ನಾವು ಮೂವರು ಸಹೋದರರು ಬೇರೆಬೇರೆಯಾಗಿ ವಾಸಿಸುತ್ತೇವೆ ಎಂದು ವಿವರಿಸಿದರು.

ಈ ಹಿಂದೆಯೂ ಬಿಜೆಪಿ ಸರಕಾರ ರಾಜ್ಯದಲ್ಲಿ ಆಡಳಿತದಲ್ಲಿದ್ದಾಗ ಸಹೋದರರ ಹಾಗೂ ಬೇರೆ ಯಾರ ರೆಫರೆನ್ಸ್ ಪಡೆದುಕೊಂಡು ನಮ್ಮ ಬಳಿ ಕೆಲಸಕ್ಕಾಗಿ ಬರಬೇಡಿ ಎಂದು ನಾನು ಸಾಕಷ್ಟು ಬಾರಿ ಹೇಳಿದ್ದೆ. ಆದರೆ, ಈಗ ಮಾಜಿ ಶಾಸಕ ಸಹೋದರನ ರೆಫರೆನ್ಸ್ ಪಡೆದುಕೊಂಡು ಹಣ ಕಳೆದು ಕೊಂಡಿರುವುದು ದುರ್ದೈವ ಸಂಗತಿ. ಆದರೆ ಈ ವಿಷಯಕ್ಕೆ ಸಂಬಂಧಿಸಿ ಕಾಂಗ್ರೆಸ್ ಮಾಡಿರುವ ಆರೋಪ ಆ ಪಕ್ಷದ ಬೌದ್ಧಿಕ ದಿವಾಳಿಗೆ ಹಿಡಿದ ಕನ್ನಡಿ. ದೇವಾನಂದ ಚವಾಣ ಈಗ ಮಾಡಿರುವ ಆರೋಪಕ್ಕೆ ನನಗೂ ಮತ್ತು ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂದು ಅವರು ತಿಳಿಸಿದರು.

ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಆಮಿಷವೊಡ್ಡಿ ವಿಜಯಪುರ ಜಿಲ್ಲೆ ನಾಗಠಾಣಾ ಕ್ಷೇತ್ರದ ಮಾಜಿ ಶಾಸಕ ದೇವಾನಂದ ಸಿಂಗ್ ಚವಾಣ ಅವರಿಂದ ಎರಡು ಕೋಟಿ ರೂಪಾಯಿ ವಸೂಲಿ ಮಾಡಿದ್ದ ಆರೋಪದಡಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಹೋದರ ಗೋಪಾಲ ಜೋಶಿ ಮತ್ತು ಸಹೋದರಿ ಸೇರಿ ಮೂವರ ವಿರುದ್ಧ ಬೆಂಗಳೂರು ಬಸವೇಶ್ವರನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.


Share It

You cannot copy content of this page