ಹಾಸನ: ಸಹೋದರ-ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇನ್ನೊಂದು ತಿಂಗಳಲ್ಲಿ ಜೈಲಿನಿಂದ ಹೊರಗೆ ಬರ್ತಾರೆ, ಯಾರೂ ಅವರ ಬಗ್ಗೆ ತಲೆಕೆಡಿಸಿಕೊಳ್ಬೇಡಿ ಎಂದು ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಹೊಳೆನರಸೀಪುರದಲ್ಲಿ ಇಂದು ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಈ ಗ್ರಾಮಕ್ಕೆ ಕೊಡುಗೆ ಕೊಟ್ಟಿದ್ದಾರೆ. ಅವರು ಶೀಘ್ರದಲ್ಲೇ ಬಿಡುಗಡೆಯಾಗುತ್ತಾರೆ. ನಾವು, ನೀವು ಎಲ್ಲರೂ ಒಟ್ಟಿಗೆ ಸ್ವಾಗತ ಮಾಡೋಣ. ಇವತ್ತಿಗೇ ಪ್ರಪಂಚ ಮುಗಿದುಹೋಗಿಲ್ಲ. ಮುಂದಕ್ಕೂ ರಾಜಕೀಯ ಏನು ಅನ್ನೋದು ನನಗೂ ಗೊತ್ತಿದೆ ಎಂದು ಅವರು ಹೇಳಿದ್ದಾರೆ.
“ದಿನನಿತ್ಯ ನಾವು ನಿಮ್ಮ ಜೊತೆ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತೇವೆ. ರೇವಣ್ಣ ಅವರು ಎಲ್ಲಾ ಹಳ್ಳಿಗಳಿಗೂ ರಸ್ತೆಗಳನ್ನು ಮಾಡಿದ್ರು. ಈಗಿನವರು ಎಲ್ಲಾ ಹಳ್ಳಿಗಳಲ್ಲೂ ದೇವಾಲಯ ನಿರ್ಮಾಣ ಮಾಡ್ತಿದ್ದಾರೆ. ನಮ್ಮ ಗ್ರಾಮಕ್ಕೆ ಯಾರು ಹಿತ? ಯಾರು ಅಹಿತ? ಎಂದು ಯೋಚನೆ ಮಾಡಬೇಕು. ಶಾಶ್ವತವಾಗಿ ನಿಮ್ಮ ಗ್ರಾಮದ ಕೆಲಸ ಮಾಡಿದವರನ್ನು ಏಕೆ ನೆನಪಿಸಿಕೊಳ್ಳುತ್ತಿಲ್ಲ? ಎಂದು ಜೆಡಿಎಸ್ ಪರಿಷತ್ ಸದಸ್ಯ ಸೂರಜ್ ರೇವಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.