ಬೆಂಗಳೂರು: ನಮಸ್ತೆ ಟ್ರಂಪ್ ಎಂದು ಬೀಗುತ್ತಿದ್ದ ಭಾರತೀಯ ಮೂಲದ 18 ಸಾವಿರ ಜನರನ್ನು ಅಮೆರಿಕದಿಂದ ಹೊರಹಾಕಲು ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀರ್ಮಾನಿಸಿದ್ದಾರೆ. ಇದರಲ್ಲಿ ಗುಜರಾತ್ ಮೂಲದವರೇ ಹೆಚ್ಚಾಗಿದ್ದಾರೆ ಎಂಬುದು ಬಹುಮುಖ್ಯ ಅಂಶವಾಗಿದೆ.
ಟ್ರಂಪ್ ಮುಂದಿನ ತಿಂಗಳು ಅಧಿಕಾರ ಸ್ವೀಕಾರ ಮಾಡಲಿದ್ದು, ಆಗ 14 ಲಕ್ಷ ವಲಸಿಗರನ್ನು ಗಡಿಪಾರು ಮಾಡಲು ತೀರ್ಮಾನಿಸಿದ್ದಾರೆ. ಇದರಲ್ಲಿ ಭಾರತದ 17,940 ಮಂದಿ ಇದ್ದಾರೆ ಎಂಬುದು ಇದೀಗ ದೃಢಪಟ್ಟಿದೆ. ಈಗಾಗಲೇ, ಅಮೇರಿಕಾದ ವಲಸೆ ಮತ್ತು ಕಸ್ಟಮ್ ಎನ್ಫೋರ್ಸ್ ಮೆಂಟ್ ಪಟ್ಟಿ ಸಿದ್ಧಪಡಿಸಿದ್ದು, ಗುಜರಾತ್, ಪಂಜಾಬ್ ಮತ್ತು ಆಂಧ್ರ ಮೂಲದವರು ಹೆಚ್ಚಾಗಿದ್ದಾರೆ ಎನ್ನಲಾಗಿದೆ.
ಕಳೆದ ಮೂರು ವರ್ಷಗಳಲ್ಲಿ ಭಾರತೀಯ ಮೂಲದ 90 ಸಾವಿರ ಜನರನ್ನು ಅಕ್ರಮ ವಲಸಿಗರು ಎಂದು ಯುಎಸ್ ಬಂಧಿಸಿದೆ. ಇದೀಗ ವಿಚಾರಣೆಯ ನಂತರ ಗಡಿಪಾರು ಮಾಡಲು 17,940 ಜನರ ಪಟ್ಟಿ ಅಂರಿಮಗೊಂಡಿದೆ. ಒಟ್ಟಾರೆ, 14.45 ಲಕ್ಷ ಜನರ ಗಡಿಪಾರು ಪಟ್ಟಿಯಲ್ಲಿ ಭಾರತ 13 ನೇ ಸ್ಥಾನದಲ್ಲಿದೆ.
ಪಟ್ಟಿಯಲ್ಲಿ ಹೊಂಡುರಾಸ್ ಮೊದಲ ಸ್ಥಾನದಲ್ಲಿದ್ದು 2.61 ಲಕ್ಷ ಜನರನ್ನು ಗಡಿಪಾರು ಮಾಡಲು ತೀರ್ಮಾನಿಸಲಾಗಿದೆ. ಎರಡನೇ ಸ್ಥಾನದಲ್ಲಿ ಗ್ವಾಟೆಮಾಲಾ ದೇಶದ 2.53 ಲಕ್ಷ ಜನರಿದ್ದಾರೆ. ಈ ಪಟ್ಟಿಯಲ್ಲಿ ಚೀನಾ ಕೂಡ ಭಾರತಕ್ಕಿಂತ ಮುಂದಿದ್ದು 37,908 ಜನರನ್ನು ಗಡಿಪಾರು ಮಾಡಲಾಗುತ್ತಿದೆ.

ಪಟ್ಟಿಯಲ್ಲಿ ಮೊದಲ 15 ಸ್ಥಾನಗಳಲ್ಲಿರುವ ದೇಶಗಳ ಪೈಕಿ ಭಾರತ ಮತ್ತು ಚೀನಾ ಹೊರತುಪಡಿಸಿ ಉಳಿದ ದೇಶಗಳು ಅಮೇರಿಕಾದ ಜತೆಗೆ ಗಡಿಯನ್ನು ಹಂಚಿಕೊಂಡಿವೆ. ಹೀಗಾಗಿ, ವಲಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಎನ್ನಬಹುದು.
ಭಾರತೀಯ ವಲಸಿಗರ ಈ ಸ್ಥಿತಿಗೆ ಭಾರತ ಸರಕಾರದ ಅಧಿಕಾರಿಗಳ ಅಸಹಕಾರವೂ ಕಾರಣ ಎಂದು ICE ತಿಳಿಸಿದೆ. ವಲಸಿಗರ ಕುರಿತು ಭಾರತ ಸರಕಾರ ನೀಡಬೇಕಿದ್ದ ದಾಖಲೆಗಳನ್ನು ಸೂಕ್ತ ಸಮಯಕ್ಕೆ ನೀಡದಿರುವ ಕಾರಣಕ್ಕೆ ಭಾರತವನ್ನು ಅಸಹಕಾರ ದೇಶಗಳ ಪಟ್ಟಿಯಲ್ಲಿ ಇರಿಸಲಾಗಿದೆ. ಇದು ವಲಸಿಗರಿಗೆ ಗಡಿಪಾರು ಸ್ಥಿತಿಯನ್ನು ತಂದೊಡ್ಡಿದೆ ಎನ್ನಬಹುದು.
ಅಸಹಕಾರದ ಪಟ್ಟಿಯಲ್ಲಿ ಭೂತಾನ್, ಚೀನಾ, ಪಾಕಿಸ್ತಾನ, ಭಾರತ, ಬರ್ಮಾ, ಕ್ಯೂಬಾ, ಇಥಿಯೋಪಿಯ, ಎರಿಟ್ರಿಯಾ, ಹಾಂಕಾಂಗ್, ಇರಾನ್, ಲಾವೋಸ್, ರಷ್ಯಾ, ಸೋನಾಲಿಯಾ ಹಾಗೂ ವೆನೆಜುವೆಲಾ ಸೇರಿ 15 ದೇಶಗಳಿವೆ. ಈ ದೇಶ ತನ್ನ ವಲಸಿಗರ ಕುರಿತು ಅಮೇರಿಕಾ ಸರಕಾರದ ಜತೆಗೆ ದಾಖಲೆಗಳ ಹಂಚಿಕೆಯಲ್ಲಿ ಸಹಕರಿಸಿಲ್ಲ ಎನ್ನಲಾಗಿದೆ.
ಡೊನಾಲ್ಡ್ ಟ್ರಂಪ್ ತನ್ನ ವಲಸೆ ನೀತಿ ಜಾರಿ ವಿಚಾರದಲ್ಲಿ ಕಟ್ಟುನಿಟ್ಟಾಗಿದ್ದು, ಅಧಿಕಾರ ಸ್ವೀಕಾರಕ್ಕೆ ಮುನ್ನವೇ 14 ಲಕ್ಷ ಜನರಿಗೆ ಗಡಿಪಾರು ಶಿಕ್ಷೆ ವಿಧಿಸಲಿದ್ದಾರೆ. ಇದರಲ್ಲಿ ‘ನಮಸ್ತೆ ಟ್ರಂಪ್’, ‘ಹೌಡಿ ಮೋದಿ’ ಎಂದ 18 ಸಾವಿರ ಭಾರತೀಯರು ಇರುವುದು ದುರಂತವೇ ಸರಿ.