ಬೆಂಗಳೂರು: ರಾಜ್ಯದ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಶಿವಮೊಗ್ಗ ಜಿಲ್ಲೆ ಜೋಗ ಜಲಪಾತದ ಬಳಿ ಅರಣ್ಯ ಭೂಮಿಯಲ್ಲಿ 100 ಕೋಟಿ ರೂ ವೆಚ್ಚದಲ್ಲಿ ಪಂಚತಾರಾ ಹೋಟೆಲ್ ಮತ್ತು ರೋಪ್ ವೇ ನಿರ್ಮಿಸಲು ಅರಣ್ಯ ಇಲಾಖೆ ಅನುಮೋದನೆ ನೀಡಿದೆ.
ಈ ಕುರಿತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನೋಡಲ್ ಅಧಿಕಾರಿ ಬ್ರಿಜೇಶ್ ಕುಮಾರ್ ಅವರು ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ. ಈ ವಿಷಯವಾಗಿ ಕೇಂದ್ರಕ್ಕೆ ಶಿಫಾರಸು ಮಾಡಬಹುದು ಎಂದೂ ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಅರಣ್ಯ ಕಾಯ್ದೆಗೆ ಹೊಸ ತಿದ್ದುಪಡಿ ಆದ ಬಳಿಕ ಐದು ಹೆಕ್ಟೇರ್ ಒಳಗಿನ ಅರಣ್ಯ ಭೂಮಿ ಪರಿವರ್ತನೆ ಯೋಜನೆಗಳಿಗೆ ಅರಣ್ಯ ಪಡೆ ಮುಖ್ಯಸ್ಥರ ಶಿಫಾರಸು ಇಲ್ಲದೆಯೇ ರಾಜ್ಯ ಸರ್ಕಾರಕ್ಕೆ ನೇರವಾಗಿ ಶಿಫಾರಸು ಮಾಡುವ ಅಧಿಕಾರ ನೋಡಲ್ ಅಧಿಕಾರಿಗೆ ಲಭಿಸಿದೆ.
ಜೋಗ ಪ್ರದೇಶದಲ್ಲಿ ಹೋಟೆಲ್ ಮತ್ತು ರೆಸಾರ್ಟ್ ಪ್ರಸ್ತಾವವನ್ನು ಅರಣ್ಯ ಸಂರಕ್ಷಣೆಯ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ 2014ರಲ್ಲಿ ಮೊದಲ ಬಾರಿಗೆ ತಿರಸ್ಕರಿಸಿತ್ತು. ಆ ಬಳಿಕ ರಾಜ್ಯ ಸರ್ಕಾರ 2021ರಲ್ಲಿ ಮತ್ತೊಮ್ಮೆ ಪ್ರಯತ್ನ ಮಾಡಿತ್ತು.
ಪಂಚತಾರಾ ಹೋಟೆಲ್ ಮತ್ತು ರೋಪ್ವೇ ನಿರ್ಮಿಸುವುದರ ಪರವಾಗಿ ಸಾಗರ ಮತ್ತು ಶಿರಸಿ ಡಿಸಿಎಫ್ಗಳು ವರದಿ ನೀಡಿದ್ದಾರೆ. ಸಾಗರ ರಕ್ಷಿತ ಅರಣ್ಯ ಪ್ರದೇಶದ ತಳಕಳಲೆ ಮತ್ತು ಶಿರಸಿ ರಕ್ಷಿತ ಅರಣ್ಯ ಪ್ರದೇಶದ ಕೋಡ್ಕಣಿ ಪ್ರದೇಶದಲ್ಲಿ ಹೋಟೆಲ್ ಮತ್ತು ರೋಪ್ವೇ ನಿರ್ಮಾಣಕ್ಕೆ ಯಾವುದೇ ಸಮಸ್ಯೆ ಇಲ್ಲ. ಅರಣ್ಯ, ವನ್ಯಜೀವಿ ಸಂಪತ್ತಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗುವುದಿಲ್ಲ. ಹೆಚ್ಚು ಮರಗಳ ಹನನವೂ ಆಗುವುದಿಲ್ಲ ಎಂದು ವರದಿ ಹೇಳಿದೆ.
ತಳಕಳಲೆಯಲ್ಲಿ ನಿರ್ಮಾಣಕ್ಕೆ ಉದ್ದೇಶಿಸಿರುವ ಪ್ರದೇಶದಲ್ಲಿ 35 ಮರಗಳು ಮಾತ್ರ ಇವೆ. ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಯಾವುದೇ ಸಸ್ಯ ಪ್ರಭೇದಗಳಿಲ್ಲ. ಅಲ್ಲದೆ, ಈ ಸ್ಥಳವು ಯಾವುದೇ ರಾಷ್ಟ್ರೀಯ ಉದ್ಯಾನ. ವನ್ಯಜೀವಿ ಧಾಮ, ಹುಲಿಸಂರಕ್ಷಿತ, ಆನೆ ಕಾರಿಡಾರ್ ಮತ್ತು ವನ್ಯಜೀವಿ ಸಂಚಾರದ ಕಾರಿಡಾರ್ ವ್ಯಾಪ್ತಿಯಲ್ಲಿ ಬರುವುದಿಲ್ಲ.
ಈ ಹಿಂದೆ ಕೇಂದ್ರಕ್ಕೆ ಸಲ್ಲಿಸಿದ್ದ ಪ್ರಸ್ತಾವದಲ್ಲಿನ ಮಾಹಿತಿ ಅಪೂರ್ಣವಾಗಿತ್ತು.
ಹೆಚ್ಚುವರಿ ಮಾಹಿತಿ ನೀಡಬೇಕು ಎಂದು ಪ್ರಸ್ತಾವವನ್ನು ತಿರಸ್ಕರಿಸಿತ್ತು. ಅದರಲ್ಲಿ ರೋಪ್ವೇಗೆ ಬಳಸುವ ಸಾಧನಗಳ ಮಾಹಿತಿ ಬಹಿರಂಗಪಡಿಸಿರಲಿಲ್ಲ. ಈಗ ಎಲ್ಲ ಅಂಶಗಳನ್ನು ಒಳಗೊಂಡ ಪರಿಷ್ಕೃತ ಪ್ರಸ್ತಾವವನ್ನು ಸಿದ್ಧಪಡಿಸಲಾಗುವುದು. ಹಳೆಯ ಪ್ರಸ್ತಾವ ಹಿಂದಕ್ಕೆ ಪಡೆಯಲಾಗುವುದು ಎಂದು ಬ್ರಿಜೇಶ್ ಕುಮಾರ್ ಹೇಳಿದ್ದಾರೆ.