ವರದಿ: ನಾರಾಯಣಸ್ವಾಮಿ ಸಿಎಸ್
ಹೊಸಕೋಟೆ : ರಸ್ತೆ ಅಪಘಾತಗಳಿಂದ ಉಂಟಾಗುವ ಸಾವು ನೋವುಗಳನ್ನು ತಪ್ಪಿಸಲು ಇರುವ ಏಕೈಕ ಮಾರ್ಗವೆಂದರೆ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವುದು. ಪ್ರತಿಯೊಬ್ಬ ವಾಹನ ಸವಾರರೂ ರಸ್ತೆ ನಿಯಮ ಮೀರದಂತೆ ವಾಹನ ಚಾಲನೆ ಮಾಡಬೇಕು ಎಂದು ಹೆಚ್ಚುವರಿ ಸಾರಿಗೆ ಆಯುಕ್ತ ಸಿ.ಮಲ್ಲಿಕಾರ್ಜುನ್ ಹೇಳಿದರು.
ನಗರದಲ್ಲಿ ಕೆ.ಆರ್.ಪುರಂ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಬುಧವಾರ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷಾ ಮಾಸಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ರಸ್ತೆ ಸುರಕ್ಷತೆ ಕಾಲ್ನಡಿಗೆ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯದಲ್ಲಿ ಪ್ರತಿವರ್ಷ 12 ಸಾವಿರ ಜನರ ಅಪಘಾತಗಳಿಂದ ಪ್ರಾಣ ಕಳೆದುಕೊಂಡರೆ, ಅದಕ್ಕಿಂತಲೂ ದುಪ್ಪಟ್ಟು ಮಂದಿ ವಿವಿಧ ಅಂಗಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಅಪಘಾತ ಪ್ರಮಾಣ ತಗ್ಗಿಸಲು ಎಲ್ಲ ಇಲಾಖೆಗಳ ಜೊತೆಗೂಡಿ ಕೆಲಸ ಮಾಡಬೇಕಿದೆ. ಅಪಘಾತ ಪ್ರಮಾಣವನ್ನು 2030ರ ಹೊತ್ತಿಗೆ ಶೇ 50 ರಷ್ಟು ಕಡಿಮೆಗೊಳಿಸುವ ಉದ್ದೇಶದಿಂದ ಸಾರ್ಜಜನಿಕರಿಗೆ ರಸ್ತೆ ಸುರಕ್ಷಾ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಹೊಸಕೋಟೆ ಡಿವೈಎಸ್ಪಿ ಅಣ್ಣ ಸಾಹೇಬ್ ಪಾಟೀಲ್ ಮಾತನಾಡಿ, ಪ್ರಾದೇಶಿಕ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ರಸ್ತೆ ಸುರಕ್ಷಾ ನಿಮಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಸಾರ್ವಜನಿಕರು ಪಾಲನೆ ಮಾಡಬೇಕು. ಕಳೆದ ಎರಡು ತಿಂಗಳಲ್ಲಿ ಬೈಕ್ ವ್ಹೀಲೆ ಮಾಡುವ 16 ಪ್ರಕರಣ ದಾಖಲಿಸಿ ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅಪಘಾತ ಹೆಚ್ಚಾಗದಂತೆ ಇಲಾಖೆ ಸೂಚಿಸುವ ನಿಯಮಗಳನ್ನು ಎಲ್ಲರೂ ತಪ್ಪದೆ ಪಾಲಿಸಬೇಕು ಎಂದರು.
ಕೆ.ಆರ್ ಪುರಂ ಪ್ರಾದೇಶಿಕ ಸಾರಿಗೆ ಅಧಿಕಾರಿ ಪಿ.ಉಮೇಶ್ ಮಾತನಾಡಿ, ಅಪಘಾತದಿಂದಾಗುವ ಸಾವು ನೋವು ಪ್ರಮಾಣ ತಗ್ಗಿಸುವುದರ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದು ಈ ಜಾಥಾ ಮುಖ್ಯ ಉದ್ದೇಶವಾಗಿದೆ ಎಂದರು.
ನಗರದ ಚನ್ನಬೈರೇಗೌಡ ಕ್ರೀಡಾಂಗಣದಿಂದ ಐಬಿ ವೃತ್ತ, ಕೆಇಬಿ ರಸ್ತೆ, ಹೂ ಮಂಡಿ ವೃತ್ತ, ಸೂಲಿಬೆಲೆ ರಸ್ತೆ ಮಾರ್ಗವಾಗಿ ವಿದ್ಯಾರ್ಥಿಗಳು, ಅಧಿಕಾರಿಗಳು ಕಾಲ್ನಡಿಗೆ ಜಾಥಾ ಮೂಲಕ ಜಾಗೃತಿ ಮೂಡಿಸಿದರು.
ಸಂಚಾರಿ ಪೊಲೀಸ್ ಠಾಣೆ ಸಿಪಿಐ ಶ್ರೀಕಂಠಯ್ಯ, ಸಿಪಿಐ ಅಶೋಕ್, ಮಾವನ ಹಕ್ಕುಗಳ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ವಿಶ್ವನಾಥ್, ಹಿರಿಯ ಮೋಟಾರ್ ವಾಹನ ನಿರೀಕ್ಷಕ ಕಮಲ್ ಬಾಬು, ಕೇಶವಪ್ಪ.ಕೆ.ವಿ.ಸುಂದರ್, ಯೋಗೇಶ್, ಜಗದೀಶ್, ಪವಿತ್ರ, ಸಂಗಮೇಶ್, ಪ್ರಖ್ಯಾತ್, ದೊಡ್ಡಲಿಂಗಯ್ಯ, ಚಾಲನಾ ತರಬೇತಿ ಶಾಲಾ ಸಿಬ್ಬಂದಿ ಭಾಗವಹಿಸಿದ್ದರು.