ಹಾವೇರಿ: ಚರಂಡಿಯಲ್ಲಿ ಬಿದ್ದು ಬಾಲಕನೊಬ್ಬ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿ, ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಚರಂಡಿಯಲ್ಲಿ ಬಿದ್ದು, ನಿವೇದನ್ ಎಂಬ ಬಾಲಕ ಮೃತಪಟ್ಟಿದ್ದು, ಪ್ರಕರಣ ಸಂಬಂಧ ನಗರಸಭೆ ಪೌರಾಯುಕ್ತ ಪರಶುರಾಮ್ ಎಂ. ಛಲವಾದಿ ಮತ್ತು ಕಿರಿಯ ಆರೋಗ್ಯ ನಿರೀಕ್ಷಕ ರಮೇಶ್ ಆರ್. ಮುಂಜೋಜಿ ಅವರನ್ನು ಅಮಾನತು ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಅಧಿಕಾರಿಗಳ ಮಾನತಿಗೆ ಮೌಖಿಕ ಆದೇಶ ನೀಡಿದ್ದರು ಎನ್ನಲಾಗಿದೆ.
ನಗರದಲ್ಲಿ ಎಡೆಬಿಡದೇ ಸುರಿದ ಮಳೆಗೆ ಚರಂಡಿಯಲ್ಲಿ ಕೊಚ್ಚಿ ಹೋಗಿದ್ದ 10 ವರ್ಷದ ಬಾಲಕ ನಿವೇದನ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂಭಾಗವೇ ಈ ಘಟನೆ ನಡೆದಿದ್ದರಿಂದ ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿತ್ತು.
ಘಟನೆಯ ವಿವರ: ಗುರುವಾರ ಬೆಳಗ್ಗೆ ತನ್ನ ಸ್ನೇಹಿತರ ಜೊತೆ ನಿವೇದನ ಚರಂಡಿಯಲ್ಲಿ ನೀರು ಹರಿಯುತ್ತಿದ್ದನ್ನ ದೃಶ್ಯ ನೋಡುತ್ತ ನಿಂತಿದ್ದ. ಈ ವೇಳೆ ಹಠಾತ್ ಕಾಲುಜಾರಿ ಚರಂಡಿಗೆ ಬಿದ್ದು ನೀರಲ್ಲಿ ಕೊಚ್ಚಿ ಹೋಗಿದ್ದ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಮತ್ತು ಪೊಲೀಸರು ಬಾಲಕನ ಪತ್ತೆ ಕಾರ್ಯ ನಡೆಸಿದ್ದರು.
ಜಿಲ್ಲಾಧಿಕಾರಿ ವಿಜಯ್ ಮಹಾಂತೇಶ್ ದಾನಮ್ಮನವರ್, ಹಾವೇರಿ ಎಸ್ಪಿ ಅಂಶುಕುಮಾರ್ ಕೂಡ ಸ್ಥಳಕ್ಕಾಗಮಿಸಿ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದ್ದರು. ಬಾಲಕ ಮುಳುಗಿದ ಸ್ಥಳದಲ್ಲಿಂದ ಹಿಡಿದು ಸುಮಾರು 100 ಮೀಟರ್ ವರೆಗೆ ಚರಂಡಿಯಲ್ಲಿ ಪತ್ತೆ ಕಾರ್ಯ ನಡೆಸಲಾಗಿತ್ತು. ಸತತ ಎರಡು ಗಂಟೆಗಳ ಕಾರ್ಯಾಚರಣೆ ಬಳಿಕ ಬಾಲಕನ ದೇಹ ಪತ್ತೆಯಾಗಿತ್ತು.