ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ನಿನ್ನೆಯಂತೆ ಇಂದು ಕರಾಳ ದಿನವಾಗಿರಲಿಲ್ಲ. ಏಕೆಂದರೆ ಇಂದು ಆಗಸ್ಟ್ 8, ಗುರುವಾರ ಭಾರತದ ಹಾಕಿ ತಂಡ ಸ್ಪೇನ್ ವಿರುದ್ಧ 2-1 ಗೋಲುಗಳಿಂದ ಗೆದ್ದು ಕಂಚಿನ ಪದಕ ಗಳಿಸಿತು.
ಇದರಿಂದ ಭಾರತ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಈವರೆಗೆ ಒಟ್ಟು 4 ಕಂಚಿನ ಪದಕಗಳನ್ನು ಗೆದ್ದಂತಾಗಿದೆ.
ಶೂಟಿಂಗ್ ನಲ್ಲಿಯೇ ಮೊದಲ 3 ಕಂಚಿನ ಪದಕಗಳು ಭಾರತಕ್ಕೆ ಪ್ರಾಪ್ತಿಯಾಗಿದ್ದವು.
ಕಂಚಿನ ಪದಕದ ಹೋರಾಟದಲ್ಲಿ ಸ್ಪೇನ್ ತಂಡದಿಂದ ಆರಂಭಿಕ ಗೋಲು!
ಹೌದು, ಸೆಮಿಫೈನಲ್ ನಲ್ಲಿ ಕ್ರಮವಾಗಿ ಜರ್ಮನಿ ಮತ್ತು ನೆದರ್ಲೆಂಡ್ಸ್ ತಂಡಗಳಿಗೆ ಸೋತ ಎರಡು ತಂಡಗಳಾದ ಭಾರತ ಮತ್ತು ಸ್ಪೇನ್ ತಂಡಗಳು ಇಂದು ಭಾರತೀಯ ಕಾಲಮಾನ ಸಂಜೆ 5:30 ರಿಂದ ಪ್ಯಾರಿಸ್ ನಲ್ಲಿ ಕಂಚಿನ ಪದಕಕ್ಕಾಗಿ ಆಟ ಆರಂಭಿಸಿದವು. ಮೊದಲ ಕ್ವಾರ್ಟರ್ ನಲ್ಲಿ ಎರಡೂ ತಂಡಗಳು ಗೋಲು ಗಳಿಸಲು ಪ್ರಯತ್ನ ನಡೆಸಿದವು.
ಆದರೆ, ಸ್ಪೇನ್ ನಾಯಕ ಮಾರ್ಕ್ ಮಿರೆಲ್ಲೆಸ್ 2ನೇ ಕ್ವಾರ್ಟರ್ ಮುಗಿಯುವ 11 ನಿಮಿಷಗಳ ಮುನ್ನ ಗೋಲು ಗಳಿಸಿ ಸ್ಪೇನ್ ತಂಡಕ್ಕೆ 1-0 ಯಿಂದ ಮುನ್ನಡೆ ಒದಗಿಸಿದರು. ಆದರೆ 3ನೇ ಕ್ವಾರ್ಟರ್ ನಲ್ಲಿ ಭಾರತ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ಅವರು 2 ಪೆನಾಲ್ಟಿ ಕಾರ್ನರ್ ಗಳ ಮೂಲಕ 2 ಗೋಲು ಹೊಡೆದು ಭಾರತಕ್ಕೆ 2-1 ಗೋಲುಗಳ ಮುನ್ನಡೆ ಒದಗಿಸಿದರು.
ಆದರೆ ಕಡೆಯ ಕ್ಷಣಗಳಲ್ಲಿ ಸ್ಪೇನ್ ತಂಡದ ಮುನ್ನಡೆ ಆಟಗಾರರು ಗೋಲು ಗಳಿಸಲು ಹಲವಾರು ಬಾರಿ ಪ್ರಯತ್ನಿಸಿದರೂ ಸಹ ಭಾರತದ ಗೋಲು ಕೀಪರ್ ಶ್ರೀಜೇಶ್ ಅದಕ್ಕೆ ಅವಕಾಶ ಕೊಡದೆ ತಡೆಗೋಡೆಯಂತೆ ನಿಂತು ಸ್ಪೇನ್ ಸೋಲಿಗೆ ಕಾರಣರಾಗಿ ಭಾರತ ತಂಡ ಕಳೆದ ಟೋಕಿಯೋ ಒಲಿಂಪಿಕ್ಸ್ನಲ್ಲಿ (2020) ಗಳಿಸಿದ್ದಂತೆ ಕಂಚಿನ ಪದಕ ಗಳಿಸಲು ನೆರವಾದರು.
ಇಷ್ಟಾದರೂ ಭಾರತ ಸತತ 2ನೇ ಬಾರಿ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆಲ್ಲಲು ನಾಯಕ ಹರ್ಮನ್ ಪ್ರೀತ್ ಸಿಂಗ್ ಸತತ 2 ಗೋಲು ಗಳಿಸಿದ್ದು ಕಾರಣವಾಯಿತು.
ಒಟ್ಟಾರೆ ಭಾರತದ ರಾಷ್ಟ್ರೀಯ ಕ್ರೀಡೆಯಾದ ಹಾಕಿಯಲ್ಲಿ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಖುಷಿ ಭಾರತೀಯ ಕ್ರೀಡಾಭಿಮಾನಿಗಳಿಗೆ ತಂದಿದೆ.