ಅರಿವು ಮತ್ತು ಜ್ಞಾನದ ಮೂಲಕವೇ ಅಂಬೇಡ್ಕರ್ ಅವರನ್ನು ಅರಿಯಬೇಕು: ಸತೀಶ್ ತಿಪಟೂರು
ಚನ್ನರಾಯಪಟ್ಟಣ: ಅಂಬೇಡ್ಕರ್ ಅರಿವು ಮಾತ್ರವೇ ನಮ್ಮನ್ನು ಬೆಳಕಿನೆಡೆಗೆ ಕೊಂಡೊಯ್ಯುತ್ತದೆ. ಜ್ಞಾನದ ಮೂಲಕವೇ ಅಂಬೇಡ್ಕರ್ ಅವರನ್ನು ಅವಾಹನೆ ಮಾಡಿಕೊಳ್ಳುವ ಪ್ರಯತ್ನವನ್ನು ನಾವೆಲ್ಲರೂ ಮಾಡಬೇಕು ಎಂದು ಮೈಸೂರು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ತಿಳಿಸಿದರು.
ನೆಲದನಿ ಫೌಂಡೇಷನ್ ವತಿಯಿಂದ ಚನ್ನರಾಯಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಭೀಮ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ದಿನಮಾನದಲ್ಲಿ ಅಂಬೇಡ್ಕರ್ ಅವರನ್ನು ಅರಿಯುವುದು ಅತ್ಯಂತ ತುರ್ತು. ಬೇರೆ ಬೇರೆ ವ್ಯಕ್ತಿಗಳನ್ನು ಮುನ್ನೆಲೆಗೆ ತಂದು ಹೊಸ ಹೊಸ ನೆರೇಟೀವ್ ಕಟ್ಟಲಾಗುತ್ತಿದೆ. ಹೀಗಾಗಿ, ನಾವು ಮೊದಲೇ ಎಚ್ಚೆತ್ತುಕೊಂಡು ನಮ್ಮ ಮಕ್ಕಳಲ್ಲಿ ಅಂಬೇಡ್ಕರ್ ಅವರನ್ನು ಬಿತ್ತಬೇಕು ಎಂದು ಕರೆ ನೀಡಿದರು.
ಡಾ. ಅಂಬೇಡ್ಕರ್ ಭವನಗಳು ಅಧ್ಯಯನ ಕೇಂದ್ರಗಳಾಗಬೇಕಿದೆ. ಅಲ್ಲಿಂದಲೇ ನಮ್ಮ ಮಕ್ಕಳನ್ನು ಸುಜ್ಞಾನದೆಡೆಗೆ ಮುಟ್ಟಿಸುವ ಪ್ರಯತ್ನವನ್ನು ನಾವು ಮಾಡಬೇಕು. ದೇಶದ ಯಾವ ಮೂಲೆಗೋದರೂ ಮೂಢನಂಬಿಕೆ ಬಿಟ್ಟಿಲ್ಲ, ಶಿಕ್ಷಣ ಮೂಢನಂಬಿಕೆಯನ್ನು ದೂರ ಮಾಡಿ ಪ್ರಬುದ್ಧತೆಯಿಂದ ಬದುಕುವ ಕಲೆಯನ್ನು ಕಲಿಸುತ್ತದೆ. ಹೀಗಾಗಿ, ಮಕ್ಕಳಿಗೆ ಶಿಕ್ಷಣವೇ ಮೊದಲ ಗುರಿಯಾಗಬೇಕು ಎಂದು ತಿಳಿಸಿದರು.
ಹಿರಿಯ ಸಾಹಿತಿ ಮೇಟಿಕೆರೆ ಹಿರಿಯಣ್ಣ ಮಾತನಾಡಿ, ನಾವೆಲ್ಲರೂ ಸರಳ ಜೀವನದಲ್ಲಿ ಬದುಕಿದವರು. ಮದುವೆಗಳು ಆಡಂಬರದ ವೇದಿಕೆಗಳಾಗುತ್ತಿವೆ. ಇದು ನಿಲ್ಲಬೇಕು. ಸರಳತೆಯನ್ನು ಮೈಗೂಡಿಸಿಕೊಳ್ಳಬೇಕು. ಹೋರಾಟ ಮಾಡದಿದ್ದರೂ ಪರವಾಗಿಲ್ಲ, ಮಾರಾಟವಾಗಬೇಡಿ ಎಂಬ ಅಂಬೇಡ್ಕರ್ ಅವರ ಮಾತಿನಂತೆ ಬದುಕಿದರೆ ಸಾಕು. ಹೋರಾಟವಿಲ್ಲದಿದ್ದರೆ ಪ್ರಜಾಪ್ರಭುತ್ವ ಸತ್ತು ಹೋಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಮಕ್ಕಳಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಸಂವಿಧಾನ ಮತ್ತು ಅಂಬೇಡ್ಕರ್ ಕುರಿತು ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಡಾ.ಅಂಬೇಡ್ಕರ್ ಅವರ ಅಪರೂಪದ ಭಾವಚಿತ್ರಗಳು, ಸತೀಶ್ ಎಚ್.ಕೆ. ಅವರ ಹತ್ತು ಸಾವಿರ ಅಂಬೇಡ್ಕರ್ ನಾಣ್ಯಗಳ ಸಂಗ್ರಹ ಹಾಗೂ ಸ್ಟಾಂಪ್ ಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಸಾಹಿತಿಗಳಾದ ನಂಜುಂಡಯ್ಯು, ಹೊನಶೆಟ್ಟಿಹಳ್ಳಿ ಗಿರಿರಾಜ್, ಬೆಳಗುಲಿ ಕೆಂಪಯ್ಯ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ರಂಗಾಯಣ ಕಲಾವಿದ ಸಂತೋಷ್ ದಿಂಡಗೂರು ಅವರ ನೇತೃತ್ವದಲ್ಲಿ ಕಾರ್ಯಕ್ರಮದ ಆಯೋಜನೆ ಮಾಡಿದ್ದು, ಸಾಹಿತಿ ಮತ್ತು ಉಪನ್ಯಾಸಕ ಹಳ್ಳಿ ವೆಂಕಟೇಶ್ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ನಾಡಕಕಾರ ಡಾ. ವೆಂಕಟೇಶ್ ಪ್ರಸಾದ್, ರಂಗ ಕಲಾವಿದೆ ನಂದಿನಿ ಅವರು ಭಾಗವಹಿಸಿದ್ದರು.


