ಬೆಂಗಳೂರು: ಆಯಾ ವರ್ಷದ ಪದಕಗಳನ್ನು ಆಯಾ ವರ್ಷವೇ ವಿತರಿಸಬೇಕು. ಇದರಿಂದ ಅಧಿಕಾರಿಗಳಿಗೆ, ಸಿಬ್ಬಂದಿಗೆ ಉತ್ಸುಕತೆಯಿಂದ ಕೆಲಸ ಮಾಡಲು ಪ್ರೇರಣೆ ನೀಡಿದಂತಾಗುತ್ತದೆ. ಅರಣ್ಯವಾಸಿಗಳ ಶ್ರಮವನ್ನು ಗುರುತಿಸುವಲ್ಲಿ ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಹಿನ್ನಡೆಯಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಅರಣ್ಯ ಇಲಾಖೆ ವತಿಯಿಂದ ನಡೆದ 49 ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿಗೆ ಮುಖ್ಯಮಂತ್ರಿಗಳ ವಿಶಿಷ್ಟ ಸೇವಾ ಪದಕ ಪ್ರದಾನ ಮಾಡಿ ಮಾತನಾಡಿದರು.
ರಾಜ್ಯದಲ್ಲಿ ಅರಣ್ಯ ಪ್ರದೇಶ ಹೆಚ್ಚಿಸಿ, ಅರಣ್ಯ ಒತ್ತುವರಿಯನ್ನು ಕಟ್ಟುನಿಟ್ಟಾಗಿ ತಡೆಯಬೇಕೆಂದು ಸೂಚನೆ ನೀಡಿದರು.
ಪ್ರಾಣಿಗಳು ಆಹಾರ ಮತ್ತು ನೀರು ಅರಸಿ ಅರಣ್ಯದಿಂದ ಹೊರಬರುತ್ತವೆ. ಆದ್ದರಿಂದ ಅರಣ್ಯ ಇಲಾಖೆಯು ನೀರು ಮತ್ತು ಆಹಾರದ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಇದರಿಂದ ಯಾವುದೇ ಮಾನವ-ಪ್ರಾಣಿ ಸಂಘರ್ಷ ಮತ್ತು ಸಾವು ಸಂಭವಿಸದಂತೆ ಖಾತ್ರಿಪಡಿಸಬಹುದು ಎಂದು ತಿಳಿಸಿದರು.
ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಈ ವರ್ಷದಿಂದ ಉಪ ವಲಯ ಅರಣ್ಯಾಧಿಕಾರಿಗಳ ಹಂತದವರೆಗಿನ ಅರಣ್ಯ ಸಿಬ್ಬಂದಿಗೆ ಕೌನ್ಸೆಲಿಂಗ್ ಆರಂಭವಾಗಲಿದ್ದು, ಮುಂದಿನ ವರ್ಷದಿಂದ ವ್ಯಾಪ್ತಿಯ ಅರಣ್ಯಾಧಿಕಾರಿಗಳ (ಆರ್‌ಎಫ್‌ಒ) ಹಂತದವರೆಗೆ ಕೌನ್ಸೆಲಿಂಗ್ ನಡೆಯಲಿದೆ.
ಎಚ್‌ಎಂಟಿಯಿಂದ ವಶಕ್ಕೆ ಪಡೆದ ಭೂಮಿಯನ್ನು ಕಬ್ಬನ್ ಪಾರ್ಕ್ ಮತ್ತು ಲಾಲ್‌ಬಾಗ್’ದಂತೆ ಸಸ್ಯಕಾಶಿಯಾಗಿ ನಿರ್ಮಾಣ ಮಾಡಲಾಗುವುದು. ಮಾನವ-ಪ್ರಾಣಿ ಸಂಘರ್ಷ ತಡೆಯಲು ರೈಲ್ವೆ ಬ್ಯಾರಿಕೇಡ್ ಪರಿಹಾರವಾಗಿದ್ದು, 324 ಕಿ.ಮೀ. ತಡೆಗೋಡೆ ನಿರ್ಮಾಣಕ್ಕೆ 2 ವರ್ಷದಲ್ಲಿ 500 ಕೋಟಿ ರೂ. ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.