ಮೂರು ಕ್ಷೇತ್ರಗಳಿಗೆ ಬೈ ಎಲೆಕ್ಷನ್ : ಅಭ್ಯರ್ಥಿಗಳ ಅಂತಿಮಗೊಳಿಸಲು ದೆಹಲಿಗೆ ಹೊರಟ ಬಿಜೆಪಿ ನಾಯಕರು
ಬೆಂಗಳೂರು: ಮುಂಬರುವ ಮೂರು ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಕುರಿತು ಹೈಕಮಾಂಡ್ ಜತೆ ಚರ್ಚೆ ನಡೆಸಲು ಬಿಜೆಪಿ ನಾಯಕರು ದೆಹಲಿಗೆ ದೌಡಾಯಿಸಿದ್ದಾರೆ.
ಚನ್ನಪಟ್ಟಣ, ಶಿಗ್ಗಾವಿ ಮತ್ತು ಬಳ್ಳಾರಿ ಗ್ರಾಮೀಣ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಅಭ್ಯರ್ಥಿಗಳ ಆಯ್ಕೆ ಕಸರತ್ತು ಜೋರಾಗಿ ನಡೆದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರನ್ನು ಹೈಕಮಾಂಡ್ ದೆಹಲಿಗೆ ಕರೆಸಿಕೊಂಡಿದ್ದು, ಚರ್ಚೆ ನಡೆಸಲಿದೆ.
ವಿಪಕ್ಷ ನಾಯಕ ಆರ್.ಅಶೋಕ್, ಸಂಸದ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಅರವಿಂದ್ ಬೆಲ್ಲದ, ಸಿ.ಟಿ.ರವಿ ಮತ್ತು ಡಾ.ಅಶ್ವಥ್ ನಾರಾಯಣ್ ಸೇರಿ ಪ್ರಮುಖ ನಾಯಕರು ದೆಹಲಿಗೆ ತೆರಳಿದ್ದಾರೆ. ನಾಳೆ ಬೆಳಗ್ಗೆ ಅಮಿತ್ ಶಾ ಮತ್ತು ಜೆ.ಪಿ. ನಡ್ಡಾ ಭೇಟಿ ಮಾಡಲಿರುವ ನಾಯಕರು ಟಿಕೆಟ್ ಅಂತಿಮಗೊಳಿಸುವ ನಿಟ್ಟಿನಲ್ಲಿ ಚರ್ಚೆ ಮಾಡಲಿದ್ದಾರೆ.
ಚನ್ನಪಟ್ಟಣದಲ್ಲಿ ಜೆಡಿಎಸ್ ಗೆ ಟಿಕೆಟ್ ಕೊಡಬೇಕೋ ಅಥವಾ ಯೋಗೇಶ್ವರ್ ಗೆ ಟಿಕೆಟ್ ಕೊಡಬೇಕೋ ಎಂಬ ಚರ್ಚೆ ನಡೆಯುತ್ತಿದೆ. ಶಿಗ್ಗಾವಿ ಟಿಕೆಟ್ ಬೊಮ್ಮಾಯಿ ಪುತ್ರನಿಗೆ ಕೊಡಿಸುವ ಪ್ರಯತ್ನ ನಡೆದಿದೆ. ಉಳಿದಂತೆ ಬಳ್ಳಾರಿಗೆ ಶ್ರೀರಾಮುಲು ಬರಬೇಕಾ ಅಥವಾ ಬೇರೆಯವರಿಗೆ ಟಿಕೆಟ್ ಕೊಡಬೇಕಾ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.
ಈ ನಿಟ್ಟಿನಲ್ಲಿ ನಾಳೆ ರಾಜ್ಯ ನಾಯಕರ ಜತೆಗೆ ಚರ್ಚೆ ನಡೆಸಲಿರುವ ಹೈಕಮಾಂಡ್ ನಾಯಕರು, ಟಿಕೆಟ್ ಅಂತಿಮಗೊಳಿಸಲಿದ್ದಾರೆ. ಹೀಗಾಗಿ, ರಾಜ್ಯ ನಾಯಕರ ದೆಹಲಿ ಭೇಟಿ ಮಹತ್ವ ಪಡೆದುಕೊಂಡಿದೆ.


