ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತರನ್ನು ತಮಿಳುನಾಡು ರಾಜ್ಯದವರು ಎಂದು ಆರೋಪಿಸಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಶೋಭಾ ಕರಂದ್ಲಾಜೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಆದೇಶ ನೀಡಿದೆ. ಈ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿ ಆದೇಶಿಸಿದೆ. ಎರಡೂ ಪ್ರಕರಣಗಳಲ್ಲಿ ಆರೋಪಗಳು ಒಂದೇ ಘಟನೆಗೆ ಸಂಬಂಧಿಸಿದ್ದಾಗಿವೆ.
ಮದ್ರಾಸ್ ಹೈಕೋರ್ಟ್ ಪ್ರಕರಣ ರದ್ದುಪಡಿಸಿರವುದರಿಂದ ಅದೇ ಆರೋಪದಲ್ಲಿ ಮತ್ತೆ ತನಿಖೆ ನಡೆಯುವ ಅಗತ್ಯವಿಲ್ಲ ಎಂದು ತಿಳಿಸಿದ ಪೀಠ, ಪ್ರಕರಣ ರದ್ದುಪಡಿಸಿ ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ. ಆದರೆ, ಚುನಾವಣೆ ಸಂದರ್ಭದಲ್ಲಿ ಮತದಾನವನ್ನು ಉತ್ತೇಜನ ಮತ್ತು ಅಭ್ಯರ್ಥಿಗಳಿಗೆ ಮತಯಾಚನೆ ಸಂದರ್ಭದಲ್ಲಿ ಈ ಕಾಯ್ದೆಯಡಿ ಪ್ರಕರಣ ದಾಖಲಿಸಬಹುದಾಗಿದೆ.
ಜೊತೆಗೆ, ಮದ್ರಾಸ್ ಹೈಕೋರ್ಟ್ ಇದೇ ಆರೋಪದಲ್ಲಿ ಪ್ರಕರಣ ರದ್ದುಗೊಳಿಸಿದೆ. ಹೀಗಾಗಿ, ಅರ್ಜಿದಾರರ ವಿರುದ್ಧ ಪ್ರಕರಣ ರದ್ದು ಮಾಡಬೇಕು” ಎಂದು ಕೋರಿದರು. ವಾದ ಆಲಿಸಿದ ನ್ಯಾಯಪೀಠ, ಅರ್ಜಿಯನ್ನು ಪುರಸ್ಕರಿಸಿ, ಪ್ರಕರಣ ರದ್ದುಪಡಿಸಿದೆ.