ಬೆಂಗಳೂರು: ಬೆಂಗಳೂರು ಹಾಗೂ ಕನ್ನಡಿಗರ ಬಗ್ಗೆ ಲಘುವಾಗಿ ಮಾತನಾಡಿ ಉದ್ಧಟತನ ಮೆರೆದಿದ್ದ ಉತ್ತರ ಭಾರತೀಯ ಮಹಿಳೆ ಸುಗಂಧ ಶರ್ಮಾ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
ಉತ್ತರ ಭಾರತೀಯರು ಬೆಂಗಳೂರು ತೊರೆದರೆ ಬೆಂಗಳೂರು ಖಾಲಿಯಾಗುತ್ತದೆ ಎಂದು ಜಾಲತಾಣದಲ್ಲಿ ಹೇಳಿಕೊಂಡಿದ್ದಳು. ತನ್ನ ಮಾತಿಗೆ ತೀವ್ರ ಆಕ್ರೋಶ ವ್ಯಕ್ತ ವಾಗುತ್ತಿದ್ದಂತೆ, ನಾನು ಬೆಂಗಳೂರನ್ನು ಪ್ರೀತಿಸುತ್ತೇನೆ.
ಕನ್ನಡವನ್ನು ಹೃದಯದಿಂದ ಕಲಿಯುವ ಪ್ರಯತ್ನ ಮಾಡುತ್ತಿ ದ್ದೇನೆ ಎನ್ನುವ ಮೂಲಕ ಸಮಜಾಯಿಷಿ ನೀಡಿದ್ದಾಳೆ. ‘ನೀವು ಉತ್ತರ ಭಾರತೀಯರು ಬೆಂಗಳೂರು ತೊರೆಯಿರಿ ಎನ್ನುತ್ತೀರಿ. ನಾವು ಬೆಂಗಳೂರಿನಿಂದ ಹೋದರೆ ನಿಮಗೆ ಬರುವ ದುಡ್ಡು ನಿಂತು ಹೋಗುತ್ತದೆ. ಊರು, ಎಲ್ಲ ಪಿ.ಜಿ.ಗಳು, ಕೋರಮಂಗಲದ ಕ್ಲಬ್ ಗಳೆಲ್ಲ ಖಾಲಿಯಾಗುತ್ತವೆ. ನೀವಲ್ಲಿ ನೋಡುವ ಪಂಜಾಬಿ ಹಾಡಿಗೆ ಕುಣಿಯುವ ಹುಡುಗಿಯರೆಲ್ಲ ನಿಮಗೆ ನೋಡಲು ಸಿಗುವುದೇ ಇಲ್ಲ. ನಿಮ್ಮ ಬಯಕೆ ಹೇಗೆ ಈಡೇರುತ್ತದೆ. ನೀವು ಏನೇ ರೀಲ್ ಮಾಡಿದರೂ ಕನ್ನಡ ಕಲಿಯಿರಿ ಎಂದು ಕಮೆಂಟ್ ಬರುತ್ತದೆ. ಕನ್ನಡ ಕಲಿತರೆ ಎಲ್ಲ ಸಮಸ್ಯೆ ಪರಿಹಾರವಾಗುತ್ತದೆಯೇ ಎಂದು ಸುಗಂಧ ಶರ್ಮ ಇನ್‌ಸ್ಟಾಗ್ರಾಂನಲ್ಲಿ ರೀಲ್ ಮಾಡಿ ಪ್ರಶ್ನಿಸಿದ್ದಳು.
ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದ್ದಂತೆ, ಕನ್ನಡದ ಸಾಹಿತಿಗಳು, ಕನ್ನಡ ಪರ ಹೋರಾಟಗಾರರು, ನಟ-ನಟಿಯರು ಸೇರಿ ಹಲವರು ಟೀಕೆ ವ್ಯಕ್ತಪಡಿಸಿದ್ದರು.