ಚಿಕ್ಕಬಳ್ಳಾಪುರ: ಜಮೀನಿನಲ್ಲಿ ಬಂಗಾರ ಸಿಕ್ಕಿದ್ದು, ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬನಿಂದ 4 ಲಕ್ಷ ರೂ. ಪಡೆದು ವಂಚನೆ ಮಾಡಿರುವ ಘಟನೆ ನಡೆದಿದೆ.
ಬೆಂಗಳೂರಿನ ಎಲೆಕ್ಟ್ರಾನಿಕ್ಸ್‌ಸಿಟಿ ನಿವಾಸಿ, ಗಾರ್ಮೆಂಟ್ಸ್‌ನಲ್ಲಿ ಸ್ಟಿಚಿಂಗ್ ಆಪರೇಟರ್ ಆಗಿರುವ ನವೀನ್ ಪ್ರದೀಪ್ (38) ವಂಚನೆಗೊಳಗಾದವರು.
15 ದಿನಗಳ ಹಿಂದೆ ಕರೆ ಮಾಡಿದ ಅಪರಿಚಿತರು ಗೌರಿಬಿದನೂರಿನ ಜೆಸಿಬಿ ವಾಹನ ಚಾಲಕ ಶ್ಯಾಮ್ ಎಂಬುದಾಗಿ ಪರಿಚಯಿಸಿಕೊಂಡಿದ್ದಾನೆ.
ಜಮೀನಿನಲ್ಲಿ ಬಂಗಾರ ಸಿಕ್ಕಿದ್ದು, ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದೇನೆ. ಇದನ್ನು ಬೇರೆ ಕಡೆ ಮಾರುವಾಗ ಏನೇನೋ ಪ್ರಶ್ನೆ ಕೇಳುತ್ತಾರೆ. ಸ್ನೇಹಿತನೊಬ್ಬ ನಿಮ್ಮ ಮೊಬೈಲ್ ಸಂಖ್ಯೆ ಕೊಟ್ಟಿದ್ದು, ಸ್ಯಾಂಪಲ್ ಬಂಗಾರವನ್ನು ಚೆಕ್ ಮಾಡಿಸಿ, ನಂಬಿಕೆ ಬಂದಮೇಲೆ ಅಡ್ವಾನ್ಸ್ ಕೊಡಿ ಎಂದಿದ್ದಾನೆ.
ಇದನ್ನು ನಂಬಿ ಗೌರಿಬಿದನೂರಿಗೆ ಹೋದ ಪ್ರದೀಪ್‌ಗೆ ಅಪರಿಚಿತರು ಶ್ಯಾಮ್ ಮತ್ತು ರಾಜು ಎಂದು ಪರಿಚಯಿಸಿಕೊಂಡಿದ್ದಾರೆ. ಬಳಿಕ ಚೆಕ್ ಮಾಡಿಕೊಳ್ಳಲು ನಕಲಿ ಬಂಗಾರ ಸರ ಕೊಟ್ಟು, 4 ಲಕ್ಷ ರೂ. ಪಡೆದುಕೊಂಡಿದ್ದಾರೆ.
ಸರ ಚೆಕ್ ಮಾಡುವಾಗ ಸ್ಥಳಕ್ಕೆ ದ್ವಿಚಕ್ರ ವಾಹನದಲ್ಲಿ ಬಂದ ಪೊಲೀಸ್ ವೇಷಧಾರಿಗಳಿಬ್ಬರು ನಾವು ಪೊಲೀಸ್, ನೀವು ಏಕೆ ಇಲ್ಲಿದ್ದೀರಿ ಎಂದು ಪ್ರಶ್ನಿಸಿದ್ದರು. ಏನಾಗುತ್ತಿದೆ ಎಂದು ಪ್ರದೀಪ್ ತಿಳಿಯುವಷ್ಟರಲ್ಲೇ ಹಣ ಎಗರಿಸಿ ಓಡಿ ಹೋಗಿದ್ದು, ಬಳಿಕ ಪಾಕೆಟ್ ಬಿಚ್ಚಿ ನೋಡಿದಾಗ ನಕಲಿ ಸರ ಎಂದು ಗೊತ್ತಾಗಿದೆ. ಚೇಳೂರು ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.