ರಾಜಕೀಯ ಸುದ್ದಿ

ಕೇಂದ್ರ ಸಚಿವ ಸೋಮಣ್ಣಗೆ ಕೊಟ್ಟಿದ್ದ ಕಚೇರಿ ಕಿತ್ತುಕೊಂಡ ಕಾಂಗ್ರೆಸ್ ಸರಕಾರ !

Share It

ತುಮಕೂರು : ಕೇಂದ್ರ ಸಚಿವ ವಿ.ಸೋಮಣ್ಣ ಗೆ ನೀಡಿದ್ದ ಕಚೇರಿಯನ್ನು ವಾಪಸ್ ಕಿತ್ತುಕೊಳ್ಳುವ ಮೂಲಕ ರಾಜ್ಯ ಸರಕಾರ ಬಿಜೆಪಿಯ ವಿರುದ್ಧ ಸೇಡಿನ ರಾಜಕಾರಣ ಮುಂದುವರಿಸಿದೆ.

ಬಿಜೆಪಿ- ಜೆಡಿಎಸ್​​ ನಾಯಕರು ಸರ್ಕಾರವನ್ನು ಟಾರ್ಗೆಟ್​​ ಮಾಡಿದ್ದರಿಂದ, ಕಾಂಗ್ರೆಸ್ ಸಹ ಸಿಕ್ಕಸಿಕ್ಕ ಕಡೆಗಳಲ್ಲಿ ತಿರುಗೇಟು ನೀಡುತ್ತಿದೆ.

ಕೇಂದ್ರ ಸಚಿವ ಎಚ್​​.ಡಿ ಕುಮಾರಸ್ವಾಮಿ ಅವರ ಜನತಾ ದರ್ಶನಕ್ಕೆ ಅಧಿಕಾರಿಗಳು ಹೋಗದಂತೆ ಸರಕಾರ ಸುತ್ತೋಲೆ ಹೊರಡಿಸಿತ್ತು. ಇದೀಗ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣಗೆ ನೀಡಲಾಗಿದ್ದ ಕಚೇರಿಯನ್ನು ವಾಪಸ್ ಪಡೆದಿದೆ.

ತುಮಕೂರು ಹಳೇ ಪರಿವೀಕ್ಷಣಾ ಮಂದಿರದಲ್ಲಿ ಕೇಂದ್ರ ಸಚಿವ ಸೋಮಣ್ಣ ಅವರು ಕಚೇರಿಯನ್ನು ಪಡೆದುಕೊಂಡಿದ್ದರು. ಆದ್ರೆ, ಉದ್ಘಾಟನೆಗೆ ಸಿದ್ಧವಿರುವಾಗಲೇ ರಾಜ್ಯ ಸರ್ಕಾರ ಕಚೇರಿಯನ್ನು ವಾಪಸ್ ಪಡೆದುಕೊಂಡಿದೆ.

ಮೊದಲಿಗೆ ಸೋಮಣ್ಣ ಅವರಿಗೆ ಕಚೇರಿ ನೀಡಲು ಅನುಮೋದನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ನೂತನ ಕಚೇರಿ ಎಂದು ಫರ್ನಿಚರ್ಸ್, ವುಡ್ ವರ್ಕ್ ಹಾಗೂ ಟೇಬಲ್ ಚೇರುಗಳನ್ನ ಹಾಕಿಸಿದ್ದರು. ಅಲ್ಲದೇ ಇದೇ ಭಾನುವಾರ ಕಚೇರಿ ಉದ್ಘಾಟನೆಗೆ ಮುಹೂರ್ತ ನಿಗದಿಯಾಗಿತ್ತು. ಆದರೆ, ಕಚೇರಿ ಉದ್ಘಾಟನೆಗೆ 2 ದಿನ ಇರುವಾಗ ರಾಜ್ಯ ಸರ್ಕಾರ ವಾಪಸ್ ಪಡೆದುಕೊಂಡಿದೆ.

4 ಕೊಠಡಿಗಳನ್ನು ಸಂಸದರೂ ಆದ ಕೇಂದ್ರ ಸಚಿವ ವಿ.ಸೋಮಣ್ಣರಿಗೆ ನೀಡಲಾಗಿತ್ತು. ರಾಜ್ಯಸರ್ಕಾರ ಒಪ್ಪಿಗೆ ನೀಡಿದ ಬಳಿಕ ಪರಿವೀಕ್ಷಣಾ ಮಂದಿರದ 4 ಕೊಠಡಿಗಳನ್ನ ಉನ್ನತೀಕರಣ ಮಾಡಿಸಿದ್ದರು. ಆದ್ರೆ, ಕಚೇರಿ ಉಪಯೋಗಕ್ಕೆ ನೀಡಿದ ಅನುಮೋದನೆ ಈ ಕೂಡಲೇ ಹಿಂಪಡೆಯುವಂತೆ ತುಮಕೂರು ಜಿಲ್ಲಾಧಿಕಾರಿಗೆ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ರಾಜಶೇಖರ್ ಸೂಚನೆ ನೀಡಿದ್ದಾರೆ.


Share It

You cannot copy content of this page