ಸಿಎಂ ಸಿದ್ದರಾಮಯ್ಯ ವಿರುದ್ಧ ಪಂಚಮಸಾಲಿ ಶ್ರೀ ಕಿಡಿ: ಮೀಸಲಾತಿ ಸಂಬಂಧ ಕಾನೂನು ಹೋರಾಟಕ್ಕೆ ಸಿದ್ಧತೆ
ಬೆಂಗಳೂರು: ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಸಿದ್ದರಾಮಯ್ಯ ನೇತ್ರತ್ವದ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಎಂದು ಕೂಡಲಸಂಗಮ ಕ್ಷೇತ್ರದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.
ಹಿಂದಿನ ಸರಕಾರದ ಅವಧಿಯಲ್ಲಿ ನಮಗೆ ಮೀಸಲಾತಿ ಸೌಲಭ್ಯ ಕಲ್ಪಿಸುವ ಕುರಿತು ಭರವಸೆ ಸಿಕ್ಕಿತ್ತು. ಆದರೆ, ಬೇಡಿಕೆ ಈಡೇರಲಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ನಮ್ಮ ಬೇಡಿಕೆ ಈಡೇರಿಸುವ ಭರವಸೆ ಇತ್ತು. ಆದರೆ, ಈವರೆಗೆ ಸರಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಗುಡುಗಿದ್ದಾರೆ.
ವಿಧಾನಸಭೆಯ ಅಧಿವೇಶನದಲ್ಲಿ ನಮ್ಮ ಸಮಾಜದ ಶಾಸಕರು ಈ ಕುರಿತು ಸರಕಾರದ ಗಮನ ಸೆಳೆಯಲಿ ಎಂದು ನಾನು ಮನವಿ ಮಾಡಿಕೊಂಡಿದ್ದೆ. ಆದರೆ, ನಮ್ಮ ಸಮಾಜದ ಯಾವ ಶಾಸಕರು ಮಾತನಾಡಲಿಲ್ಲ. ಹಿಂದಿನ ಸರಕಾರದಲ್ಲಿ ಕೆಲ ಶಾಸಕರು ನಮ್ಮ ಹೋರಾಟದ ಬಗ್ಗೆ ಸದನದಲ್ಲಿ ಮಾತನಾಡುತ್ತಿದ್ದರು. ಆದರೆ, ಈಗ ಮಾತನಾಡುತ್ತಿಲ್ಲ ಎಂದರು.
ಕಾನೂನು ಹೋರಾಟಕ್ಕೆ ಸಿದ್ಧತೆ: ಸರಕಾರದ ನಡೆಯನ್ನು ವಿರೋಧಿಸಿ ಕಾನೂನು ಹೋರಾಟ ನಡೆಸಲು ತೀರ್ಮಾನಿಸಿದ್ದೇವೆ. ಹೀಗಾಗಿ, ವಕೀಲರ ಸಭೆ ಕರೆದು ಚರ್ಚಿಸಿ ನಂತರ ಮುಂದಿನ ಕ್ರಮದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ನ್ಯಾಯಾಲಯದಲ್ಲಿ ನಮ್ಮ ಹೋರಾಟವನ್ನು ಮುಂದುವರಿಸುವ ಕುರಿತು ವಕೀಲರ ಸಮ್ಮುಖದಲ್ಲಿ ತೀರ್ಮಾನಿಸಲಾಗುತ್ತದೆ ಎಂದಿದ್ದಾರೆ.
ಸೆ.22 ಕ್ಕೆ ಪಂಚಮಸಾಲಿ ಮಹಾಪರಿಷತ್ : ಸೆಪ್ಟೆಂಬರ್22 ರಂದು ಪಂಚಮಸಾಲಿ ಹೋರಾಟ ಮತ್ತು ಸಂಘಟನೆ ಕುರಿತಂತೆ ಚರ್ಚೆ ನಡೆಸಲು ಬೆಳಗಾವಿಯಲ್ಲಿ ಮಹಾಪರಿಷತ್ ಆಯೋಜನೆ ಮಾಡಲಾಗಿದೆ. ಈ ಸಭೆಯಲ್ಲಿ ಸಮಾಜದ ಎಲ್ಲ ಮುಖಂಡರು ಮತ್ತು ಗಣ್ಯರು ಭಾಗವಹಿಸಿ, ನಮ್ಮ ಮುಂದಿನ ಹೋರಾಟ ಮತ್ತು ಸಂಘಟನೆ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಶ್ರೀಗಳು ತಿಳಿಸಿದರು.


