ರಾಜಕೀಯ ಸುದ್ದಿ

ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ನೂತನ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ

Share It

ಬೆಂಗಳೂರು:ನೂತನವಾಗಿ ಆಯ್ಕೆಯಾಗಿರುವ ಕರ್ನಾಟಕ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ರೆಡ್ಡಿ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಧನ್ಯವಾದ ತಿಳಿಸಿದರು.

ಸಿಎಂ ನಿವಾಸದಲ್ಲಿ ಬುಧವಾರ ಸಂಜೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಅವರು, ತಮ್ಮನ್ನು ಕೆಪಿಸಿಸಿ ಮಹಿಳಾ ಘಟಕಕ್ಕೆ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ ತಿಳಿಸಿದರು. ಅನಂತರ ಮಹಿಳಾ ಘಟಕದ ಸಂಘಟನಾ ಶಕ್ತಿ ಹೆಚ್ಚಿಸುವ ಕುರಿತು ಚರ್ಚೆ ನಡೆಸಿದರು.

ಸಿಎಂ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ನಾವು ನೀಡುತ್ತಿರುವ ಉಚಿತ ಕೊಡುಗೆಗಳ ಫಲಾನುಭವಿಗಳಲ್ಲಿ ಮಹಿಳೆಯರೇ ಹೆಚ್ಚಾಗಿದ್ದಾರೆ. ಹೀಗಾಗಿ, ಮಹಿಳೆಯರಿಗೆ ನಮ್ಮ ಗ್ಯಾರಂಟಿಗಳ ಕುರಿತು ಅರಿವು ಮೂಡಿಸುವುದು ಮಹಿಳಾ ಘಟಕದ ಹೊಣೆಗಾರಿಕೆ. ಹೀಗಾಗಿ, ಆ ನಿಟ್ಟಿನಲ್ಲಿ ಶಕ್ತಿಯುತವಾಗಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.

ರಾಜ್ಯಾದ್ಯಂತ ಪ್ರವಾಸ ಮಾಡಿ ಮಹಿಳೆಯರನ್ನು ಸಂಘಟನೆ ಮಾಡುವ, ಮಹಿಳೆಯರಿಗೆ ಕಾಂಗ್ರೆಸ್ ಕೊಡುಗೆಗಳನ್ನು ನೆನಪಿಸುವ ಕೆಲಸವನ್ನು ಮಹಿಳಾ ಘಟಕ ಮಾಡಲಿ, ಅದಕ್ಕೆ ನೀವು ಸೂಕ್ತವಾದ ಆಯ್ಕೆಯಾಗಿದ್ದು, ಮುಂದಿನ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಬಲಗೊಳಿಸಿ ಎಂದು ಹಾರೈಸಿದರು.

ಸೌಮ್ಯ ರೆಡ್ಡಿ ಅವರು ಪ್ರಭಾವಿ ಸಚಿವ ರಾಮಲಿಂಗಾ ರೆಡ್ಡಿ ಅವರ ಪುತ್ರಿಯಾಗಿದ್ದು, ಒಂದು ಬಾರಿ ಶಾಸಕಿಯಾಗಿದ್ದವರು. ಕಳೆದ ಲೋಕಸಭೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಿದ್ದರು. ಇದೀಗ ಕಾಂಗ್ರೆಸ್ ಹೈಕಮಾಂಡ್ ನೂತನ ಜವಾಬ್ದಾರಿಯನ್ನು ನೀಡಿದೆ.

ಈ ವೇಳೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಕೆ.ಗೋವಿಂದ ರಾಜ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಇದ್ದರು.


Share It

You cannot copy content of this page