ರಾಜಕೀಯ ಸುದ್ದಿ

ಬಿಜೆಪಿಗೆ ಮತ್ತೊಂದು ಬಂಡಾಯದ ಭೀತಿ: ಸಿ.ಪಿ.ಯೋಗೇಶ್ವರ್ ಪಕ್ಷೇತರ ಸ್ಪರ್ಧೆಯ ಬಾಂಬ್

Share It


ಬೆಂಗಳೂರು:ಮೂಡಾ ಪಾದಯಾತ್ರೆಗೆ ಕೌಂಟರ್ ಕೊಟ್ಟು, ಬಳ್ಳಾರಿ ಪಾದಯಾತ್ರೆಯ ಮೂಲಕ ಈಗಾಗಲೇ ಬಂಡಾಯ ಸಾರಿರುವ ಬಿಜೆಪಿಯಲ್ಲಿ ಮತ್ತೊಂದು ಬಂಡಾಯದ ಸುದ್ದಿ ಹರಿದಾಡುತ್ತಿದೆ.

ಮುಂಬರುವ ಉಪಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಬಿಜೆಪಿ ಟಿಕೆಟ್ ಕೊಡದಿದ್ದರೆ ತಾವು ಪಕ್ಷೇತರವಾಗಿ ಸ್ಪರ್ಧೆ ಮಾಡುವುದಾಗಿ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ. ಆ ಮೂಲಕ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಜಗಜ್ಜಾಹೀರಾಗಿದೆ.

ಚನ್ನಪಟ್ಟಣ, ಬಳ್ಳಾರಿ ಗ್ರಾಮೀಣ ಮತ್ತು ಶಿಗ್ಗಾವಿ ಕ್ಷೇತ್ರಗಳಿಗೆ ಲೋಕಸಭೆಗೆ ಆಯ್ಕೆಯಾದ ಎಚ್.ಡಿ.ಕುಮಾರಸ್ವಾಮಿ, ತುಕರಾಂ ಮತ್ತು ಬಸವರಾಜ್ ಬೊಮ್ಮಾಯಿ ಅವರ ಜಾಗಕ್ಕೆ ಚುನಾವಣೆ ನಡೆಯಲಿದೆ. ಹೀಗಾಗಿ, ಮೂರು ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳ ಆಯ್ಕೆ ಮಾಡಬೇಕಿದೆ.

ಶಿಗ್ಗಾವಿ ಮತ್ತು ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಹಣಾಹಣಿಯಿದ್ದು ಅಲ್ಲಿನ ಟಿಕೆಟ್ ಅನ್ನು ಬಿಜೆಪಿಗೆ ಬಿಟ್ಟುಕೊಟ್ಟು, ಚನ್ನಪಟ್ಟಣ ಟಿಕೆಟ್ ಜೆಡಿಎಸ್ ಗೆ ನೀಡಲು ಮೈತ್ರಿ ಪಕ್ಷಗಳ ನಾಯಕರು ಬಹುತೇಕ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಯೋಗೇಶ್ವರ್ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಚನ್ನಪಟ್ಟಣ ದಿಂದ ಯೋಗೇಶ್ವರ್ ಸ್ಪರ್ಧೆ ಮಾಡಿದರೆ, ಜೆಡಿಎಸ್ ಅಸ್ತಿತ್ವ ಕಳೆದುಕೊಳ್ಳಲಿದೆ. ಹೀಗಾಗಿ, ಕುಮಾರಸ್ವಾಮಿ ಜೆಡಿಎಸ್ ನಿಂದಲೇ ಅಭ್ಯರ್ಥಿ ಹಾಕುವ ಆಲೋಚನೆಯಲ್ಲಿದ್ದಾರೆ. ಹೀಗಾಗಿ, ಯೋಗೇಶ್ವರ್ ಸ್ಪರ್ಧೆಗೆ ಕುಮಾರಸ್ವಾಮಿ ಆಸಕ್ತಿ ತೋರಿಸಿಲ್ಲ. ಹೀಗಾಗಿ, ಯೋಗೇಶ್ವರ್ ಸಿಡಿದೆದ್ದಿದ್ದು, ಬಂಡಾಯದ ಮಾತನ್ನಾಡಿದ್ದಾರೆ.

ದೆಹಲಿಗೆ ಹೊರಟ ಯೋಗೇಶ್ವರ್: ಚನ್ನಪಟ್ಟಣ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟು ಕೊಡಲು ಒಪ್ಪದ ಕುಮಾರಸ್ವಾಮಿ ನಡೆಯ ವಿರುದ್ಧ ಹೈಕಮಾಂಡ್ ಗಮನಸೆಳೆಯಲು ಸಿ.ಪಿ.ಯೋಗೇಶ್ವರ್ ದೆಹಲಿಗೆ ತೆರಳಿದ್ದಾರೆ. ಯಾವುದೇ ಕಾರಣಕ್ಕೂ ಕ್ಷೇತ್ರ ಕಾಂಗ್ರೆಸ್ ಪಾಲಾಗಲು ಬಿಡಬಾರದು. ಮೈತ್ರಿ ಪಕ್ಷ ಇಲ್ಲಿ ಗೆಲ್ಲಬೇಕೆಂದರೆ, ನನಗೆ ಟಿಕೆಟ್ ನೀಡಬೇಕು. ಇಲ್ಲವಾದರೆ, ನಾನು ಪಕ್ಷೇತರವಾಗಿ ಸ್ಪರ್ಧೆ ಮಾಡಿ, ನನ್ನ ಸಾಮರ್ಥ್ಯ ಸಾಬೀತು ಮಾಡುತ್ತೇನೆ ಎಂದು ಎಚ್ಚರಿಸಿದ್ದಾರೆ.


Share It

You cannot copy content of this page