ಅಹ್ಮದಾಬಾದ್/ನಾಗ್ಪುರ; ದೇಶೀಯ ಕ್ರಿಕೆಟ್ ಟೂರ್ನಿಯಾದ ರಣಜಿ ಟ್ರೋಫಿ 2025 ರ ಸೀಸನ್ ನಲ್ಲಿ ಅಂತಿಮ ಹಂತಕ್ಕೆ ಬಂದು ನಿಂತಿದೆ. ಅಗ್ರ 4 ತಂಡಗಳ ನಡುವೆ ನಡೆದ ರಣಜಿ ಸೆಮಿಫೈನಲ್ ಪಂದ್ಯಗಳಲ್ಲಿ ಜಯಗಳಿಸಿದ ವಿದರ್ಭ ಹಾಗೂ ಕೇರಳ ತಂಡಗಳು ಫೈನಲ್ ಪ್ರವೇಶಿಸಿವೆ.
ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಫೇವರಿಟ್ ಮುಂಬೈ ತಂಡವನ್ನು ಮಣಿಸಿದ ವಿದರ್ಭ ತಂಡ ಫೈನಲ್ಗೇರುವಲ್ಲಿ ಯಶಸ್ವಿಯಾಯಿತು. ಇತ್ತ ಅಹ್ಮದಾಬಾದ್ ನಲ್ಲಿ ಆತಿಥೇಯ ಗುಜರಾತ್ ತಂಡವನ್ನು ರೋಚಕ ರೀತಿಯಲ್ಲಿ ಮಣಿಸಿದ ಕೇರಳ ತಂಡ ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್‌ತಲುಪಿದೆ. ಈ ಪಂದ್ಯಾವಳಿಯ 74 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೇರಳ ತಂಡ ಫೈನಲ್ ತಲುಪಿದ ಸಾಧನೆ ಮಾಡಿದೆ.
ಅಚ್ಚರಿಯ ಸಂಗತಿಯೆಂದರೆ ಉಭಯ ತಂಡಗಳ ನಡುವೆ ನಡೆದ ಸೆಮಿಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕೇರಳ ತಂಡ ಪಡೆದುಕೊಂಡ 2 ರನ್‌ಗಳ ಮುನ್ನಡೆಯೇ ಫೈನಲ್ಗೇರುವಲ್ಲಿ ನಿರ್ಣಾಯಕ ಪಾತ್ರವಹಿಸಿತು. ಫೆಬ್ರವರಿ 17 ರಂದು ಪ್ರಾರಂಭವಾದ ಕೇರಳ-ಗುಜರಾತ್ ಸೆಮಿಫೈನಲ್ ಪಂದ್ಯದಲ್ಲಿ ಮೊದಲ ದಿನದಂದು, ಟಾಸ್ ಗೆದ್ದು ಮೊದಲ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡಿದ ಕೇರಳ 187 ಓವರ್‌ಗಳಲ್ಲಿ 457 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು.
ಇದಕ್ಕೆ ಪ್ರತಿಯಾಗಿ ಗುಜರಾತ್ ಕೂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 174 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 455 ರನ್ ಗಳಿಸಿತು. ಈಗ ಗುಜರಾತ್‌ಗೆ ಸಮಬಲ ಸಾಧಿಸಲು 2 ರನ್‌ಗಳು ಮತ್ತು ಮುನ್ನಡೆ ಸಾಧಿಸಲು 2 ರನ್‌ಗಳು ಬೇಕಾಗಿದ್ದವು. ಆದರೆ ಒಂದೇ ಒಂದು ವಿಕೆಟ್ ಉಳಿದಿತ್ತು. ಆದರೆ ಅದೃಷ್ಟ ಮಾತ್ರ ಕೇರಳ ಪರ ವಾಲಿತು.
ವಾಸ್ತವವಾಗಿ 175 ನೇ ಓವರ್‌ನ 4ನೇ ಎಸೆತದಲ್ಲಿ ಗುಜರಾತ್ ಬ್ಯಾಟ್ಸ್‌ಮನ್ ನಾಗಸ್ವಲ್ಲಾ ದೊಡ್ಡ ಹೊಡೆತವನ್ನು ಹೊಡೆಯಲು ಪ್ರಯತ್ನಿಸಿದರು. ಆದರೆ ಚೆಂಡು ಶಾರ್ಟ್ ಲೆಗ್‌ನಲ್ಲಿ ನಿಂತ್ತಿದ್ದ ಫೀಲ್ಡರ್ ಸಲ್ಮಾನ್ ನಿಜರ್ ಅವರ ಹೆಲ್ಮೆಟ್‌ಗೆ ತಗುಲಿ ಮೊದಲ ಸ್ಲಿಪ್‌ನ ಹಿಂದೆ ಪುಟಿದೆದ್ದಿತು. ಅಲ್ಲೇ ಇದ್ದ ಸಚಿನ್ ಬೇಬಿ ಸುಲಭವಾಗಿ ಕ್ಯಾಚ್ ಹಿಡಿದರು.
ಈ ರೀತಿಯಾಗಿ ಕೇರಳ ಕೊನೆಯ ವಿಕೆಟ್ ಉರುಳಿಸುವುದರೊಂದಿಗೆ 2 ರನ್‌ಗಳ ಮುನ್ನಡೆಯನ್ನು ಪಡೆಯಿತು. ಆದಾಗ್ಯೂ, ಇನ್ನೂ ಎರಡು ಇನ್ನಿಂಗ್ಸ್ ಆಟ ಉಳಿದಿದೆ. ಆದರೆ ಫೆಬ್ರವರಿ 21 ಈ ಪಂದ್ಯದ ಕೊನೆಯ ದಿನವಾಗಿದ್ದು, ನಿಯಮಗಳ ಪ್ರಕಾರ, ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸುವ ತಂಡ ಅಂದರೆ ಕೇರಳ ಫೈನಲ್‌ಗೆ ಅರ್ಹತೆ ಪಡೆಯುತ್ತದೆ.
ಅಜರುದ್ದೀನ್ ಅಮೋಘ ಬ್ಯಾಟಿಂಗ್: ಕೇರಳ ಫೈನಲ್ಗೇರುವಲ್ಲಿ ಅಜರುದ್ದೀನ್ ಪಾತ್ರ ಅಪಾರವಾಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಅವರು 341 ಎಸೆತಗಳಲ್ಲಿ 177 ರನ್ ಗಳಿಸಿದರು. ಇದರರ್ಥ ಅವರು ರನ್ ಗಳಿಸುವುದರ ಜೊತೆಗೆ, ಕ್ರೀಸ್‌ನಲ್ಲಿಯೂ ಸಮಯ ಕಳೆದರು. ಮೊದಲು ಬ್ಯಾಟಿಂಗ್ ಮಾಡಿದ ಕೇರಳ ತಂಡ ಕೇವಲ 86 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತು.
4ನೇ ವಿಕೆಟ್ ಕೂಡ 157 ರನ್‌ಗಳಿಗೆ ಪತನಗೊಂಡಿತು. ಇದಾದ ನಂತರ, ಅಜರುದ್ದೀನ್ ತಂಡದ ನಾಯಕ ಸಚಿನ್ ಬೇಬಿ ಜೊತೆಗೂಡಿ 49 ರನ್‌ಗಳ ಜೊತೆಯಾಟವಾಡಿದರು. ಆದರೆ ಕೇರಳ ತಂಡದ ಸ್ಕೋರ್ 205 ರನ್ ಗಳಿದ್ದಾಗ ಸಚಿನ್ 69 ರನ್ ಗಳಿಸಿ ಔಟಾದರು.
ಇದಾದ ನಂತರ, ಅಜರುದ್ದೀನ್ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳೊಂದಿಗೆ ಸೇರಿ ಸ್ಕೋರ್ ಅನ್ನು 457 ರನ್‌ಗಳಿಗೆ ಕೊಂಡೊಯ್ದರು. ಬೌಲಿಂಗ್‌ನಲ್ಲಿ ಆದಿತ್ಯ ಸರ್ವತೆ ಮತ್ತು ಜಲಜ್ ಸಕ್ಸೇನಾ ತಲಾ 4 ವಿಕೆಟ್ ಪಡೆದರು. ಎನ್. ಬಾಸಿಲ್ ಮತ್ತು ನಿಧಿಶ್ ತಲಾ 1 ವಿಕೆಟ್ ಪಡೆದರು. ಗುಜರಾತ್ ಪರ ಪ್ರಿಯಾಂಕ್ ಪಾಂಚಾಲ್ 148 ರನ್ ಹೊಡೆದರೂ ಸಹ ಮೊದಲ ಇನಿಂಗ್ಸ್ ನಲ್ಲಿ ತಮ್ಮ ತಂಡಕ್ಕೆ ಮುನ್ನಡೆ ಕೊಡಿಸಲು ಸಾಧ್ಯವಾಗಲಿಲ್ಲ.
ಒಟ್ಟಾರೆ ಮುಂದಿನ ಫೆಬ್ರವರಿ 26 ಬುಧವಾರ ಬೆಳಗ್ಗೆ 9:30 ರಿಂದ ಮಹಾರಾಷ್ಟ್ರ ರಾಜ್ಯದ ನಾಗ್ಪುರ ಕ್ರೀಡಾಂಗಣದಲ್ಲಿ ನಾಗ್ಪುರ ಮತ್ತು ಕೇರಳ ತಂಡಗಳ ನಡುವೆ ರಣಜಿ ಟ್ರೋಫಿ-2025 ಫೈನಲ್ ಪಂದ್ಯ ನಡೆಯಲಿದೆ.
ಕರ್ನಾಟಕ ಮೂಲದ ಕರಣ್ ನಾಯರ್ ನಾಯಕತ್ವದ ವಿದರ್ಭ ತಂಡ 74 ವರ್ಷಗಳ ನಂತರ ರಣಜಿ ಟ್ರೋಫಿಯಲ್ಲಿ ಫೈನಲ್ ಪ್ರವೇಶಿಸಿರುವ ಕೇರಳ ತಂಡದ ವಿರುದ್ಧ ಚಾಂಪಿಯನ್ ಆಗಲು ಸೆಣಸಾಡಲಿದೆ.