ಅಪರಾಧ ಸುದ್ದಿ

ಬಸ್‌ನಲ್ಲಿ ಶುರುವಾದ ಕ್ಷುಲ್ಲಕ ಜಗಳ ಕೊಲೆಯಲ್ಲಿ ಅಂತ್ಯ: ಶಿರಸಿ ಪಟ್ಟಣದಲ್ಲಿ ದುರ್ಘಟನೆ

Share It

ಶಿರಸಿ: ಬಸ್‌ನಲ್ಲಿ ಶುರುವಾದ ಕ್ಷುಲ್ಲಕ ಜಗಳ ವ್ಯಕ್ತಿಯೊಬ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಶಿರಸಿ ಪಟ್ಟಣದ ಸರಕಾರಿ ಆಸ್ಪತ್ರೆ ಮುಂಭಾಗ ನಡೆದಿದೆ.

ಶಿರಸಿಯಿಂದ ಬೆಂಗಳೂರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ನಡುವೆ ಸಣ್ಣ ವಿಷಯಕ್ಕೆ ಜಗಳ ಶುರುವಾಗಿತ್ತು. ಈ ವೇಳೆ ನಡೆದ ದುರ್ಘಟನೆ ಬಸ್ಸಿನಲ್ಲಿದ್ದವರನ್ನು ಬೆಚ್ಚಿಬೀಳಿಸಿದೆ. ಈ ವೇಳೆ ಯುವಕನೊಬ್ಬ ಚಾಕುವಿನಿಂದ ವ್ಯಕ್ತಿಗೆ ಎದೆಗೆ ಇರಿದು ಪರಾರಿಯಾಗಿದ್ದಾನೆ.

ಕೊಲೆ ಮಾಡಿ ಪರಾರಿಯಾದ ವ್ಯಕ್ತಿಯನ್ನು ಪ್ರೀತಂ ಡಿಸೋಜಾ ಎಂದು ಗುರುತಿಸಲಾಗಿದ್ದು, ಕೊಲೆಯಾದಾತ ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಗಂಗಾಧರ್ ಎಂದು ಹೇಳಲಾಗಿದೆ.

ಸಾಗರದ ಗಂಗಾಧರ್ ಪತ್ನಿಯ ಮನೆಗೆ ಶಿರಸಿಗೆ ಬಂದಿದ್ದರು. ಈ ವೇಳೆ ಪತ್ನಿಯ ಜತೆಗೆ ಬೆಂಗಳೂರು ಬಸ್‌ನಲ್ಲಿ ವಾಪಸ್ಸಾಗುತ್ತಿದ್ದರು. ಅದೇ ಬಸ್‌ನಲ್ಲಿ ಪ್ರೀತಂ ಡಿಸೋಜಾ ಕೂಡ ಪ್ರಯಾಣ ಮಾಡುತ್ತಿದ್ದು, ಸಣ್ಣ ಮಾತಿಗೆ ಇಬ್ಬರ ನಡುವೆ ಜಗಳ ಶುರುವಾಗಿತ್ತು.

ಶಿರಸಿಯ ಸರಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಬರುತ್ತಿದ್ದಂತೆ ಜಗಳ ವಿಕೋಪಕ್ಕೆ ತಿರುಗಿ, ಪ್ರೀತಂ ಚಾಕುವಿನಿಂದ ಗಂಗಾಧರ್ ಕುತ್ತಿಗೆಗೆ ಇರಿದು ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮುಂದಿನ ವಿಚಾರಣೆ ಕೈಗೊಂಡಿದ್ದಾರೆ.


Share It

You cannot copy content of this page