ಬೆಳಗಾವಿ: ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಘಟನೆ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವಿನ ಗಡಿ ವಿವಾದವನ್ನು ಹೆಚ್ಚಿಸಿದೆ.
ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಎಂಇಎಸ್ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಿಂದ ಕೊಲ್ಲಾಪುರಕ್ಕೆ ತೆರಳುತ್ತಿದ್ದ ಬಸ್‌ಗಳ ಸಂಚಾರವನ್ನು ಕೆಎಸ್‌ಆರ್‌ಟಿಸಿ ಸ್ಥಗಿತಗೊಳಿಸಿದೆ.
ಕೊಲ್ಲಾಪುರಕ್ಕೆ ನಿತ್ಯವೂ ಬೆಳಗಾವಿ ಸೇರಿದಂತೆ ಗಡಿಭಾಗದ ಜಿಲ್ಲೆಗಳಿಂದ 120 ಬಸ್‌ಗಳು ಸಂಚಾರ ಮಾಡುತ್ತಿದ್ದವು. ಇದೀಗ ಎಲ್ಲ ಬಸ್‌ಗಳನ್ನು ನಿಲ್ಲಿಸಿದ್ದು, ಮಧ್ಯಾಹ್ನದ ನಂತರ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರದಿಂದ ಬರುತ್ತಿದ್ದ ಬಸ್‌ಗಳನ್ನು ಸಹ ನೆನ್ನೆಯೇ ಮಹಾರಾಷ್ಟ್ರ ಸರಕಾರ ಸ್ಥಗಿತಗೊಳಿಸಿತ್ತು. ಕರ್ನಾಟಕದ ಗಡಿವರೆಗೆ ಮಾತ್ರವೇ ಬಸ್‌ಗಳನ್ನು ಓಡಿಸುತ್ತಿತ್ತು. ರಾಜ್ಯದಲ್ಲಿಯೂ ಪ್ರತಿಭಟನೆಗಳು ನಡೆಯುತ್ತಿರುವ ಕಾರಣ ಅಹಿತಕರ ಘಟನೆಗಳನ್ನು ತಡೆಯಲು ಮುಂಜಾಗೃತಾ ಕ್ರಮವಾಗಿ ತೀರ್ಮಾನ ಕೈಗೊಳ್ಳಲಾಗಿದೆ.