ಬೆಂಗಳೂರು: ನಗರದಲ್ಲಿ ಸುರಂಗ ಮಾರ್ಗದ ರಸ್ತೆ ಮಾಡೇ ಮಾಡುತ್ತೇವೆ. ಜೊತೆಗೆ ಎಲಿವೇಟೆಡ್ ಕಾರಿಡಾರ್ ಕೂಡ ನಿರ್ಮಿಸುತ್ತೇವೆ ಎಂದು ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಭಾರತಕ್ಕೆ ಮಾದರಿ. ಎಲ್ಲಾ ರಾಜ್ಯಗಳೂ ನಮನ್ನು ಗಮನಿಸಿ ಅನುಸರಿಸಲಾರಂಭಿಸುತ್ತಾರೆ. ಬೆಂಗಳೂರು ನಗರದಲ್ಲಿ ಸುರಂಗ ಮಾರ್ಗದ ವ್ಯವಸ್ಥೆ ಸಾಧ್ಯವೇ? ಎಂಬ ಪ್ರಶ್ನೆಯನ್ನು ಬಿಜೆಪಿ ಕೇಳುತ್ತಿದೆ. ಈ ಯೋಜನೆಯನ್ನು ನಾವು ಮಾಡಿಯೇ ಮಾಡುತ್ತೇವೆ. ಜತೆಗೆ ಮೆಟ್ರೊ ಹೊಸ ಮಾರ್ಗಗಳಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಿಸುತ್ತೇವೆ. ಒಂದೇ ಮಾರ್ಗದಲ್ಲಿ ಮೆಟ್ರೊ ಹಾಗೂ ರಸ್ತೆ ಮಾರ್ಗದ ಸೇತುವೆ ನಿರ್ಮಿಸುತ್ತೇವೆ. ಬಿಬಿಎಂಪಿ ಹಾಗೂ ಬಿಎಂಆರ್ಸಿಎಲ್ ಶೇ.50ರಷ್ಟು ಪಾಲುದಾರಿಕೆಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳುತ್ತೇವೆ ಎಂದು ಡಿಸಿಎಂ ಸ್ಪಷ್ಟಪಡಿಸಿದರು.
ರಾಜಕಾಲುವೆಗಳ ಇಕ್ಕೆಲದಲ್ಲಿ 50 ಅಡಿ ನಿರ್ಮಾಣಗಳಿಗೆ ಅವಕಾಶ ಇರುವುದಿಲ್ಲ. ಟಿಡಿಆರ್ ನೀಡಿ ಅಲ್ಲಿ ರಸ್ತೆ ನಿರ್ಮಿಸುತ್ತೇವೆ. ಈ ರೀತಿಯ 300 ಕಿ.ಮೀ.ಗೆ 3000 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಮೇಲ್ಸೇತುವೆ, ಸುರಂಗ ಮಾರ್ಗ ಹಾಗೂ ರಾಜಕಾಲುವೆ ಪಕ್ಕದ ರಸ್ತೆ ಸೇರಿ 700 ರಿಂದ 800 ಕಿ.ಮೀ. ಹೊಸ ರಸ್ತೆ ನಿರ್ಮಾಣವಾಗುತ್ತಿದ್ದು, ಸಂಚಾರದ ಒತ್ತಡ ಕಡಿಮೆಯಾಗುತ್ತದೆ. ಸಾಲ ಮಾಡಿಯಾದರೂ ಈ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ. ಇಡೀ ವಿಶ್ವವೇ ಬೆಂಗಳೂರು ಮತ್ತು ಕರ್ನಾಟಕವನ್ನು ಗಮನಿಸುತ್ತಿದೆ. ಅದಕ್ಕಾಗಿ ಮೂಲ ಸೌಕರ್ಯ ಯೋಜನೆಗಳಿಗೆ ಒತ್ತು ನೀಡುವುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು.
ಬಿಜೆಪಿಯವರು ಹಲಾಲ್ ಬಜೆಟ್ ಎಂದು ಟೀಕೆ ಮಾಡಲಿ, ಅವರು ಬೇರೆ ಇನ್ನೇನು ಹೇಳಲಿಕ್ಕೆ ಸಾಧ್ಯ?, ಸತ್ಯ ಮುಚ್ಚಿಡಲು ಆಗುವುದಿಲ್ಲ. ಕಣ್ಣಿಂದ ಓದಿದ್ದಾರೆ, ಕಿವಿಯಲ್ಲಿ ಕೇಳಿದ್ದಾರೆ, ಬಾಯಲ್ಲಿ ಇನ್ನೇನು ಹೇಳಲು ಆಗುತ್ತದೆ?, ಕಣ್ಣಿಂದ ಸುಳ್ಳು ಹೇಳಲು ಸಾಧ್ಯವಿಲ್ಲ. ಅದಕ್ಕಾಗಿ ಬಾಯಿಂದ ಸುಳ್ಳು ಹೇಳುತ್ತಿದ್ದಾರೆ. ನೀರಾವರಿ ಯೋಜನೆಗಳಿಗೆ ಕಳೆದ ವರ್ಷಕ್ಕಿಂತಲೂ 2 ಸಾವಿರ ಕೋಟಿ ರೂ. ಅನುದಾನ ಹೆಚ್ಚಾಗುತ್ತಿದೆ. ನೀರಾವರಿಗೆ ಬೇರೆ ರೀತಿಯ ಹೊಸ ರೀತಿಯ ಪ್ರಕಟಣೆಗಳನ್ನು ಮಾಡುತ್ತೇವೆ. ನೀರಾವರಿ ನಿಗಮಗಳಲ್ಲಿ ಈ ಬಗ್ಗೆ ಚರ್ಚೆಯಾಗಿದೆ ಎಂದು ಹೇಳಿದರು.
ಬೆಂಗಳೂರಿನ ವಿವಿಗೆ ಮಾಜಿ ಪ್ರಧಾನಿ ದಿ.ಮನಮೋಹನ್ ಸಿಂಗ್ ಅವರ ಹೆಸರು ನಾಮಕರಣ ಮಾಡಲು ಬಿಜೆಪಿ ವಿರೋಧ ಮಾಡುತ್ತಿರುವುದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. ಬಿಜೆಪಿಯವರು ದೀನ್ ದಯಾಳ್ ಎಂದೆಲ್ಲಾ ಹೆಸರು ಇಟ್ಟಿದ್ದಾರೆ. ನಾವು ಮಾಜಿ ಪ್ರಧಾನಿ ದಿವಂಗತ ಮನಮೋಹನ್ ಸಿಂಗ್ ಅವರ ಹೆಸರನ್ನು ನಾಮಕರಣ ಮಾಡಬಾರದೆ? ಎಂದು ಪ್ರಶ್ನಿಸಿದರು.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೇಲ್ಸೇತುವೆ, ಎಲೆಕ್ಟ್ರಾನಿಕ್ ಸಿಟಿಗೆ ಮೇಲ್ಸೇತುವೆ, ನೆಲಮಂಗಲ ರಸ್ತೆ ಮೇಲ್ಸೇತುವೆ, ನರೇಗಾ ಯೋಜನೆ, ಆರ್ಟಿಐ, ಆಹಾರ ಭದ್ರತೆ, ಮಾಹಿತಿ ಹಕ್ಕು, ಆಶಾ ಕಾರ್ಯಕರ್ತರ ನಿಯೋಜನೆ ಸೇರಿದಂತೆ ಹಲವಾರು ಜನತಾ ಯೋಜನೆಗಳನ್ನು ಮಾಡಿದ್ದು ಮನಮೋಹನ್ ಸಿಂಗ್. ಬಿಜೆಪಿಯವರು ಇಂತಹ ಒಂದು ಜನಪರ ಕಾರ್ಯಕ್ರಮ ಮಾಡಿದ್ದಾರೆಯೇ? ಕಲ್ಯಾಣ ಕರ್ನಾಟಕಕ್ಕೆ 371 ಅನುಸಾರ ಪ್ರತಿವರ್ಷ 5 ಸಾವಿರ ಕೋಟಿ ರೂ. ನೀಡುವ ಯೋಜನೆಯನ್ನು ಈ ಬಜೆಟ್ ನಲ್ಲಿ ಮುಂದುವರೆಸಲಾಗಿದೆ ಎಂದು ಅವರು ತಿಳಿಸಿದರು.