ಕೊಲ್ಕತ್ತಾ: 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪಿಗೆ ಆಕೆಯ 6 ನೇ ವರ್ಷದ ಹುಟ್ಟುಹಬ್ಬದ ದಿನವೇ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.
ಕಳೆದ ನವೆಂಬರ್ 24 ರಲ್ಲಿ 42 ವರ್ಷದ ದಿನಗೂಲಿ ನೌಕರನೊಬ್ಬ 5 ವರ್ಷದ ಬಾಲಕಿಯನ್ನು ರೇಪ್ ಮಾಡಿ ಕೊಲೆ ಮಾಡಿದ್ದ. ಆ ಬಾಲಕಿಯ 6 ನೇ ವರ್ಷದ ಹುಟ್ಟುಹಬ್ಬದ ದಿನವಾದ ಜ.17 ರಂದೇ ಪಶ್ಚಿಮಬಂಗಾಳದ ಪೋಕ್ಸೋ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.
ನೆರೆಮನೆಯ ನಿವಾಸಿಯಾಗಿದ್ದ ಅಶೋಕ್ ಸಿಂಗ್, ನವೆಂಬರ್ 24 ರಂದು ಮನೆಯ ಮುಂದೆ ಆಟವಾಡುತ್ತಿದ್ದ 5 ವರ್ಷದ ಬಾಲಕಿಗೆ 5 ರುಪಾಯಿಯ ಚಿಪ್ಸ್ ಪ್ಯಾಕೇಟ್ ಕೊಟ್ಟು ಆಕೆಯನ್ನು ಅತ್ಯಾಚಾರ ಮಾಡಿದ್ದ. ಬಾಲಕಿ ಆತನನ್ನು ದೊಡ್ಡಪ್ಪ ಎಂದು ಕರೆಯುತ್ತಿದ್ದು, ಆತನನ್ನು ನಂಬಿ ಹೋಗಿದ್ದು ಆಕೆಯ ಜೀವಕ್ಕೆ ಎರವಾಗಿತ್ತು ಎನ್ನಬಹುದು.
ಹೂಗ್ಲಿ ಜಿಲ್ಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸಿದ್ದರು. 13 ದಿನಗಳ ಅವಧಿಯಲ್ಲಿಯೇ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದರು. 54 ದಿನಗಳ ವಿಚಾರಣೆಯಲ್ಲಿಯೇ ನ್ಯಾಯಾಲಯ ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸುವ ಮೂಲಕ, ಅದರಲ್ಲೂ ಬಾಲಕಿಯ 6 ನೇ ವರ್ಷದ ಜನ್ಮದಿನದಂದೇ ಶಿಕ್ಷೆ ಪ್ರಕಟಿಸಿದೆ.
ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರಾದ ಚಂದ್ರಪ್ರಭ ಚಕ್ರವರ್ತಿ ಅವರು ಮರಣದಂಡನೆ ಶಿಕ್ಷೆಯನ್ನು 54 ದಿನಗಳಲ್ಲಿಯೇ ನೀಡಿದ ದಾಖಲೆ ಬರೆದಿದ್ದಾರೆ. ಶಂಕರ್ ಗಂಗೋಪಾಧ್ಯಾಯ ಅವರು, ಸರಕಾರಿ ಅಭಿಯೋಜಕರಾಗಿ ಕಾರ್ಯನಿರ್ವಹಿಸಿದ್ದರು.