ಮೈಸೂರು: ಹಾಡುಹಗಲೇ ನಾಲ್ವರು ಮುಸುಕುಧಾರಿಗಳು ಕಾರನ್ನು ಅಡ್ಡಗಟ್ಟಿ ದರೋಡೆ ಮಾಡಿರುವ ಘಟನೆ ಮೈಸೂರು ಹೊರವಲಯದಲ್ಲಿ ನಡೆದಿದೆ.
ಮೈಸೂರಿನ ಜಯಪುರ ಹೋಬಳಿಯ ಹಾರೋಹಳ್ಳಿ ಬಳಿ ದೆಹಲಿ ನೋಂದಣಿ ಸಂಖ್ಯೆಯನ್ನು ಹೊಂದಿರುವ ಇನ್ನೋವಾ ಕಾರನ್ನು ಅಡ್ಡಗಟ್ಟಿ ಸುಲಿಗೆ ಮಾಡಲಾಗಿದೆ. ದರೋಡೆಕೋರರು ಕೈಯ್ಯಲ್ಲಿ ಮಚ್ಚು, ಲಾಂಗ್ ಗಳನ್ನು ಕೈಯಲ್ಲಿ ಹಿಡಿದಿರುವುದು ಕಂಡುಬAದಿದೆ.
ದರೋಡೆ ನಡೆಯುವಾಗ ರಸ್ತೆಯಲ್ಲಿ ಅನೇಕ ವಾಹನಗಳು ನಿಂತಿದ್ದು, ಈ ಘಟನೆಯ ವಿಡಿಯೋ ಚಿತ್ರೀಕರಣವನ್ನು ಮತ್ತೊಂದು ಕಾರಿನಲ್ಲಿದ್ದ ಪ್ರಯಾಣೀಕರು ಮಾಡಿಕೊಂಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ದರೋಡೆಕೋರರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಕೇರಳದ ಉದ್ಯಮಿ ಸೂಪಿ ಎಂಬಾತನ ಕಾರನ್ನು ಕಿತ್ತುಕೊಂಡು ಹೋಗಿದ್ದಾರೆ ಎಂದು ಹೇಳಲಾಗಿದೆ. ದರೋಡೆಕೋರರು ಕೇರಳ ಮೂಲದವರು ಎಂದು ಹೇಳಲಾಗುತ್ತಿದ್ದು, ಅವರನ್ನು ಬಂಧಿಸಲು ಗಡಿಯಲ್ಲಿ ಪೊಲೀಸರು ಭದ್ರತೆ ನಿಯೋಜನೆ ಮಾಡಿದ್ದಾರೆ.
ಸ್ಥಳಕ್ಕೆ ಡಿವೈಎಸ್‌ಪಿ ರಘು ನೇತೃತ್ವದ ಪೊಲೀಸರ ತಂಡ ಭೇಟಿ ನೀಡಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸುತ್ತಮುತ್ತ ಇರುವ ಸಿಸಿಟಿವಿ ಕ್ಯಾಮೆರಾಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸ್ಥಳೀಯರ ಹೇಳಿಕೆಗಳನ್ನು ಪಡೆಯಲಾಗುತ್ತಿದೆ.