ರಾಜಕೀಯ ಸುದ್ದಿ

ಕುಟುಂಬ ಸಮೇತ ವಿದೇಶಕ್ಕೆ ಹೊರಟ ಡಿಸಿಎಂ ಡಿ.ಕೆ ಶಿವಕುಮಾರ್

Share It

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜಕೀಯ ಜಂಜಾಟಗಳಿಗೆ ತಲೆಕೆಡಿಸಿಕೊಳ್ಳದೆ ಕುಟುಂಬ ಸಮೇತರಾಗಿ ವಿದೇಶಿ ಪ್ರವಾಸಕ್ಕೆ ತೆರಳಿದ್ದಾರೆ.

ಕೆಪಿಸಿಸಿ ಬದಲಾವಣೆ, ಮುಖ್ಯಮಂತ್ರಿ ಸ್ಥಾನ ಸೇರಿ ನಾನಾ ರೀತಿಯ ಕಾವೇರಿದ ಚರ್ಚೆಗಳು ಕಾಂಗ್ರೆಸ್‌ನಲ್ಲಿ ನಡೆಯುತ್ತಿವೆ. ಕೆಲವು ಸಚಿವರು ದೆಹಲಿಗೆ ದಂಡಯಾತ್ರೆ ನಡೆಸಿ ಬರಿಗೈಲಿ ವಾಪಸ್ ಬಂದಿದ್ದಾರೆ. ಆದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಮೊದಲಿನಿಂದಲೂ ಕೂಲಾಗಿದ್ದು, ಈಗ ಆರಾಮ ಪಡೆಯಲು ಕುಟುಂಬ ಸಮೇತ ದುಬೈಗೆ ತೆರಳಿರುವ ಅವರು 4 ದಿನ ಮೋಜಿನ ಪ್ರವಾಸ ನಡೆಸಲಿದ್ದಾರೆ.

ಇತ್ತೀಚೆಗೆ ಕುಟುಂಬ ಸಮೇತರಾಗಿ ಡಿ.ಕೆ ಶಿವಕುಮಾರ್ ಅವರು ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ ಕುಂಭಮೇಳಕ್ಕೆ ತೆರಳಿದ್ದರು. 10 ದಿನಗಳ ನಂತರ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಎಂದಿಗಿಂತಲೂ ಈ ಬಾರಿ ಬಿಸಿಬಿಸಿ ಚರ್ಚೆಗಳಾಗುವ ಸಾಧ್ಯತೆ ಇವೆ. ವಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಸಭೆಗಳ ಮೇಲೆ ಸಭೆ ನಡೆಸಿ ಚರ್ಚಿಸಬೇಕಾದ ವಿಷಯಗಳು, ಸರ್ಕಾರದ ಲೋಪದೋಷಗಳನ್ನು ಪಟ್ಟಿ ಮಾಡುತ್ತಿದ್ದಾರೆ.

ಆದರೆ ಕಾಂಗ್ರೆಸ್‌ನಲ್ಲಿ ತಿರುಗೇಟು ನೀಡುವಂತೆ ಯಾವ ತಯಾರಿಗಳೂ ನಡೆಯುತ್ತಿರುವ ಲಕ್ಷಣಗಳು ಕಾಣಿಸುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಿದ್ದು ಪೆಟ್ಟು ಮಾಡಿಕೊಂಡಿದ್ದು ವೀಲ್ ಚೇರಿನಲ್ಲಿ ಓಡಾಡುತ್ತಿದ್ದಾರೆ. ವಿಶ್ರಾಂತಿ ನಡುವೆಯೂ ಬಜೆಟ್‌ನ ಪೂರ್ವಭಾವಿ ಸಭೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಶಾಸಕಾಂಗ ಪಕ್ಷದ ನಾಯಕರ ಅನುಪಸ್ಥಿತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಪಕ್ಷವನ್ನು ಸಜ್ಜುಗೊಳಿಸಬೇಕಾದ ವಾತಾವರಣವಿದೆ. ಮೂಲಗಳ ಪ್ರಕಾರ ಮಂಗಳವಾರ ವಿದೇಶದಿಂದ ಕರ್ನಾಟಕಕ್ಕೆ ಮರಳಿದ ಬಳಿಕ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಮೇಲಿಂದ ಮೇಲೆ ರಾಜಕೀಯ ಸಭೆ ನಡೆಸಲು ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.


Share It

You cannot copy content of this page