ದೇವಸ್ಥಾನಗಳಿಗೆ ಭರಪೂರ ಅನುದಾನ: ಅಹಿಂದ ಸರಕಾರದ ಹಿಂದೂಪರ ನಡೆ
ಬೆಂಗಳೂರು: ಹಿಂದೂ ವಿರೋಧಿ ಎಂಬ ಹಣೆಪಟ್ಟಿ ಕಟ್ಟುವ ವಿಪಕ್ಷಗಳಿಗೆ ಹಿಂದೂ ಧಾರ್ಮಿಕ ಸ್ಥಳಗಳಿಗೆ ಭರಪೂರ ಅನುದಾನ ನೀಡುವ ಮೂಲಕವೇ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ತಾವು ಮಂಡನೆ ಮಾಡಿದ 16 ನೇ ಬಜೆಟ್‌ನಲ್ಲಿ ಹಿಂದೂ ದೇವಾಲಯಗಳ ರಕ್ಷಣೆಗೆ ಸರಕಾರ ತೆಗೆದುಕೊಂಡಿರುವ ಅನೇಕ ಕ್ರಮಗಳ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಜತೆಗೆ, ಹಿಂದೂ ದೇವಾಲಯಗಳ ಅಬಿವೃದ್ಧಿಗೆ ಭಾರಿ ಅನುದಾನ ಘೋಷಣೆ ಮಾಡಿದ್ದಾರೆ.
ಸವದತ್ತಿ ಯಲ್ಲಮ್ಮ ದೇವಸ್ಥಾನವನ್ನು 199 ಕೋಟಿ ರು.ಗಳ ಅನುದಾನದಲ್ಲಿ ಅಭಿವೃದ್ಧಿ ಮಾಡಲು ಸರಕಾರ ಯೋಜನೆ ರೂಪಿಸಿದೆ. ಇದೇ ಮಾದರಿಯಲ್ಲಿ ಘಾಟಿ ಸುಬ್ರಮಣ್ಯ ದೇವಸ್ಥಾನ, ಕೊಪ್ಪಳದ ಹುಲಿಗೆಮ್ಮ ದೇವಸ್ಥಾನದ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೂಪಿಸಿದೆ.
ಚಂದ್ರಗುತ್ತಿಯನ್ನು ಪ್ರವಾಸೋಧ್ಯಮ ಸ್ಥಳವಾಗಿ ಗುರುತಿಸಿ, ಅಭಿವೃದ್ಧಿಗೊಳಿಸಲು ಅನೇಕ ಕ್ರಮಗಳನ್ನು ತೆಗೆದುಕೊಳ್ಳಲು ಬಜೆಟ್‌ನಲ್ಲಿ ಯೋಜನೆ ರೂಪಿಸಲಾಗಿದೆ.
ದೇವಸ್ಥಾನಗಳ ಆಸ್ತಿಯ ಸಂರಕ್ಷಣೆಗೆ ಮುಂದಾಗಿರುವ ಸರಕಾರ, ಕಂದಾಯ ಇಲಾಖೆ ಮೂಲಕ ದೇವಸ್ಥಾನಗಳ ಆಸ್ತಿಯ ದಾಖಲಾತಿ ಮಾಡಿಕೊಡುತ್ತಿದೆ. ಉಳಿದ ಆಸ್ತಿಯ ಒತ್ತುವರಿ ತೆರವಿಗೆ ತೀರ್ಮಾನಿಸಿದೆ. ತಸ್ತಿಕ್ ಹಣವನ್ನು 62 ಸಾವಿರ ರುಪಾಯಿಗೆ ಹೆಚ್ಚಿಗೆ ಮಾಡಿದೆ.


