ಹಾಸನ: ಹುಲ್ಲಿಗೆ ಬಿದ್ದಿದ್ದ ಬೆಂಕಿಯಲ್ಲಿ ಸಿಲುಕಿ ರೈತ ಸಾವು
ಹಾಸನ: ಟ್ರ್ಯಾಕ್ಟರ್ ಗೆ ತುಂಬಿದ್ದ ಹುಲ್ಲಿಗೆ ಬಿದ್ದ ಬೆಂಕಿಯನ್ನು ನಂದಿಸುವ ಪ್ರಯತ್ನದಲ್ಲಿ ರೈತನೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹಾಸನ ಜಿಲ್ಲೆ ಆಲೂರು ತಾಲೂಕಿನ ಕಿರುಗಡಲು ಗ್ರಾಮದಲ್ಲಿ ಘಟನೆ ನಡೆದಿದ್ದು, ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟ್ರ್ಯಾಕ್ಟರ್ ನಲ್ಲಿ ರೈತರು ಹುಲ್ಲು ತುಂಬಿಕೊAಡು ಹೋಗುತ್ತಿದ್ದರು. ಈ ವೇಳೆ ಹುಲ್ಲಿಗೆ ಬೆಂಕಿ ಬಿದ್ದಿದ್ದು, ಟ್ರ್ಯಾಕ್ಟರ್ ನಲ್ಲಿದ್ದ ಮೂವರು ರೈತರ ಪೈಕಿ ಇಬ್ಬರು ಕೆಳಗಿಳಿದಿದ್ದರು.
ಮತ್ತೊಬ್ಬ ರೈತ ರಂಗಸ್ವಾಮಿ, ಹುಲ್ಲಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಲು ಟ್ರ್ಯಾಕ್ಟರ್ ಮೇಲೇರಿದ್ದು, ಬೆಂಕಿ ಹೊತ್ತಿಕೊಂಡಿದ್ದ ಹುಲ್ಲು ಆತನ ಮೇಲೆ ಬಿದ್ದಿದೆ. ಈ ವೇಳೆ ಉಳಿದ ರೈತರು ಮತ್ತು ಸ್ಥಳೀಯರು ಆತನ ರಕ್ಷಣೆಗೆ ಪ್ರಯತ್ನಿಸಿದ್ದು, ಆತ ಗಂಭಿರವಾಗಿ ಸುಟ್ಟ ಗಾಯಗಳಿಂದ ನರಳುತ್ತಿದ್ದರು.
ತಕ್ಷಣವೇ ರಂಗಸ್ವಾಮಿ ಅವರನ್ನು ಹಾಸನದ ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾರೆ. ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ರೈತ ಹೊಳೇನರಸೀಪುರ ತಾಲೂಕಿನವರಾಗಿದ್ದು, ಹುಲ್ಲು ಕೊಂಡೊಯ್ಯಲು ಆಲೂರಿಗೆ ಬಂದಿದ್ದರು ಎನ್ನಲಾಗಿದೆ.


