ಬೆಂಗಳೂರು: ಮಾರಕಾಸ್ತ್ರ ಹಿಡಿದು ರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಾ ಪುಂಡಾಟ ಮೆರೆಯುತ್ತಿದ್ದ ಇಬ್ಬರು ಪುಂಡರನ್ನು ನಗರದ ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮಹೇಶ್ (19) ಹಾಗೂ ಮಂಜುನಾಥ್ (19) ಎಂದು ಗುರುತಿಸಲಾಗಿದ್ದು, ಈ ಇಬ್ಬರು ಮಾರ್ಚ್ 15ರಂದು ಔಟರ್ ರಿಂಗ್ ರಸ್ತೆಯ ಚೌಡೇಶ್ವರಿ ಬಸ್ ನಿಲ್ದಾಣದ ಬಳಿ ಮಾರಕಾಸ್ತ್ರ ಹಿಡಿದು ರಸ್ತೆಗೆ ಉಜ್ಜುತ್ತಾ ಸ್ಕೂಟರ್ ವ್ಹೀಲಿಂಗ್ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಸಂಚಾರಿ ಪೊಲೀಸರು, ವಿಡಿಯೋ ಆಧರಿಸಿ ಪುಂಡರ ಪತ್ತೆಗೆ ಬಲೆ ಬೀಸಿದ್ದರು. ಇದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಎಂಬುದು ಗೊತ್ತಾಗುತ್ತಿದ್ದಂತೆ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದರು.
ಪುಂಡರು ಸಹಚರರ ಜತೆಗೆ ಸೇರಿಕೊಂಡು ತಮ್ಮ ಏರಿಯಾದಲ್ಲಿ ಭಯ ಸೃಷ್ಟಿಸುವ ಸಲುವಾಗಿ ಇಂತಹ ಪುಂಡಾಟ ಮೆರೆದಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಇವರ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸಿದ ಆರೋಪದಲ್ಲಿಯೂ ಪ್ರಕರಣ ದಾಖಲಿಸಿಕೊಂಡಿದ್ದು, ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಇಬ್ಬರು ಯುವಕರು ಬೆಂಗಳೂರಿನ ಗಂಗಮ್ಮ ಸರ್ಕಲ್‌ನ ರಾಮಚಂದ್ರಪುರದ ನಿವಾಸಿಗಳು ಎಂದು ಹೇಳಲಾಗಿದೆ.