ನೆಲಮಂಗಲ: 19 ಗುಂಟೆ ಜಮೀನಿಗಾಗಿ ತನ್ನ ಸ್ವಂತ ಅಣ್ಣನ ಮಗನನ್ನೇ ಕಾರಿನಿಂದ ಗುದ್ದಿಸಿ ಕೊಂದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ.
ನೆಲಮಂಗಲ ತಾಲೂಕಿನ ಮಾಕನಕುಪ್ಪೆ ಗ್ರಾಮದ ಚಿಕ್ಕಣ್ಣ ಮತ್ತು ಆತನ ಸಹೋದರ ಸುರೇಶ್ ನಡುವೆ 19 ಗುಂಟೆ ಜಮೀನಿಗಾಗಿ ವ್ಯಾಜ್ಯ ನಡೆಯುತ್ತಿತ್ತು. ಈ ವೇಳೆ ಆರೋಪಿ ಸುರೇಶ್ ತನ್ನ ಅಣ್ಣನ ಮಗನನ್ನೇ ಕೊಂದರೆ, ಆಸ್ತಿ ತನಗೆ ಉಳಿಯುತ್ತದೆ ಎಂದು ಆಲೋಚಿಸಿ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ.
ಕೊಲೆಯಾದ ರವಿಕುಮಾರ್ (28) ರಸ್ತೆಯಲ್ಲಿ ಹೋಗುತ್ತಿರುವಾಗ ಚಿಕ್ಕಪ್ಪ ಸುರೇಶ್ ಕಾರಿನಿಂದ ಆತನನ್ನು ಗುದ್ದಿಸಿದ್ದಾನೆ. ಸ್ವಲ್ಪ ದೂರದಲ್ಲೇ ಕಾರು ನಿಲ್ಲಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ರಸ್ತೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರವಿಕುಮಾರ್ ನನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರು.
ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ, ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದು, ತಲೆಮರೆಸಿಕೊಂಡಿರುವ ಆರೋಪಿ ಸುರೇಶ್‌ಗಾಗಿ ಬಲೆ ಬೀಸಿದ್ದಾರೆ.