ಬನ್ನೇರುಘಟ್ಟ ಸುವರ್ಣಮುಖಿ ಕಲ್ಯಾಣಿಯಲ್ಲಿ ಬಿದ್ದು ಇಬ್ಬರು ಸ್ನೇಹಿತರ ಸಾವು
ಬೆಂಗಳೂರು: ಬನ್ನೇರುಘಟ್ಟಕ್ಕೆ ತೆರಳಿದ್ದ ಇಬ್ಬರು ಯುವಕರು ಸುವರ್ಣಮುಖಿ ಕಲ್ಯಾಣಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತರನ್ನು ಬೊಮ್ಮನಹಳ್ಳಿಯ ದೀಪು ಮತ್ತು ಯೋಗೇಶ್ವರನ್ ಎಂದು ಗುರುತಿಸಲಾಗಿದೆ. ಈ ಇಬ್ಬರು ಹೆಬ್ಬಗೋಡಿ ಬಳಿಯ ಸೇಂಟ್ ಜೋಸೆಪ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ.
ನಾಲ್ಕೆöÊದು ಯುವಕರು ಸ್ನೇಹಿತರ ಜತೆಯಲ್ಲಿ ಬನ್ನೇರುಘಟ್ಟಕ್ಕೆ ಪ್ರವಾಸಕ್ಕೆಂದು ಹೋಗಿದ್ದರು. ಈ ವೇಳೆ ಬನ್ನೇರುಘಟ್ಟದ ಚಂಪಕದಾಮ ದೇವಸ್ಥಾನದ ಹಿಂಭಾಗದಲ್ಲಿರುವ ಸುವರ್ಣಮುಖಿ ನದಿಯ ಉಗಮಸ್ಥಾನಕ್ಕೆ ಸ್ನಾನಕ್ಕೆಂದು ತೆರಳಿದ್ದರು.
ಈ ವೇಳೆ ಕಲ್ಯಾಣಿಯ ನೀರಿನಲ್ಲಿ ಯೋಗೇಶ್ವರನ್ ಮುಳುಗಿ ಒದ್ದಾಡುತ್ತಿದ್ದ.ಸ್ನೇಹಿತನ್ನು ಕಾಪಾಡಲು ತೆರಳಿದ ದೀಪು ಕೂಡ ಈ ವೇಳೆ ಈಜಿಕೊಂಡು ಹೊರಗೆ ಬರಲು ಸಾಧ್ಯವಾಗದೆ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಮೃತ ಯುವಕರ ಶವಗಳನ್ನು ಹೊರತೆಗೆದ ಅಗ್ನಿಶಾಮಕ ದಳ ಸಿಬ್ಬಂದಿ ಶವಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


